Home ಜಿಲ್ಲೆ ಇಬ್ರಾಹಿಂ ರೋಜಾ ಅಂಗಳದಲ್ಲಿ ಕಲಾ ವೈಭವಕ್ಕೆ ಮೆರುಗು

ಇಬ್ರಾಹಿಂ ರೋಜಾ ಅಂಗಳದಲ್ಲಿ ಕಲಾ ವೈಭವಕ್ಕೆ ಮೆರುಗು

ವಿಜಯಪುರ, ನ.16: ವಿಜಯಪುರದ ಕಲೆ, ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ‘ಕಲಾಧಾರಾ’ ಸಾಂಸ್ಕೃತಿಕ ಉತ್ಸವ ಎರಡನೇ ವರ್ಷವೂ ವೈಭವದಿಂದ ಆರಂಭಗೊಂಡಿದೆ.
ಕಳೆದ ವರ್ಷ ಗೋಳಗುಮ್ಮಟದ ಆವರಣದಲ್ಲಿ ನಡೆದಿದ್ದ ಈ ಉತ್ಸವ ಈ ಬಾರಿ ಐತಿಹಾಸಿಕ ಇಬ್ರಾಹಿಂ ರೋಜಾ ಅಂಗಳದಲ್ಲಿ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪದ ತಾಣವಾಗಿರುವ ವಿಜಯಪುರ ಜಿಲ್ಲೆಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇಂಜಿನಿಯರಿಂಗ್ ಕೌಶಲಕ್ಕೆ ಸಾಕ್ಷಿಯಾಗಿರುವ ಗೋಳಗುಮ್ಮಟ, ತಾಜ್‍ಮಹಲ್ ನಿರ್ಮಾಣಕ್ಕೆ ಸ್ಫೂರ್ತಿಯಾಗಿರುವ ಇಬ್ರಾಹಿಂ ರೋಜಾ, ಬಾರಾ ಕಮಾನ್ ಸೇರಿದಂತೆ ಜಿಲ್ಲೆಯ ಅನೇಕ ಐತಿಹಾಸಿಕ ಸ್ಮಾರಕಗಳು ವಿಶ್ವಮಟ್ಟದಲ್ಲಿ ಗಮನ ಸೆಳೆಯುವಂತಹ ಮಹತ್ವ ಹೊಂದಿವೆ. ಈ ಹಿನ್ನೆಲೆಯಲ್ಲಿ ವಿಜಯಪುರದ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಮೂಲಕ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕಲಾಧಾರಾ ಉತ್ಸವವು ಹಿಂದಿನ ನವರಸಪುರ ಉತ್ಸವವನ್ನು ನೆನಪಿಸುವಂತಿದೆ. ಮುಂದಿನ ದಿನಗಳಲ್ಲಿ ಕಲಾಧಾರಾ ತಂಡದ ಸಲಹೆಗಳನ್ನು ಸಹ ಪಡೆದುಕೊಳ್ಳಲಾಗುವುದು ಎಂದರು.
ಆದಿಲ್‍ಶಾಹಿ ಅರಸರ ಕಾಲದ ಸಮಗ್ರ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಈ ಸಾಹಿತ್ಯವನ್ನು ಉತ್ತರ ಭಾರತಕ್ಕೂ ತಲುಪಿಸುವ ಉದ್ದೇಶದಿಂದ ಪರ್ಷಿಯನ್ ಭಾಷೆಯಲ್ಲಿರುವ ಸಾಹಿತ್ಯವನ್ನು ಉರ್ದು ಭಾಷೆಗೂ ಅನುವಾದಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ವಿಜಯಪುರ ನಗರದಲ್ಲಿ 250ಕ್ಕೂ ಹೆಚ್ಚು ಸ್ಮಾರಕಗಳಿದ್ದು, ಅವುಗಳಲ್ಲಿ 82 ಸ್ಮಾರಕಗಳು ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿವೆ. ಈ ಎಲ್ಲ ಸ್ಮಾರಕಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.
ಖ್ಯಾತ ಇತಿಹಾಸ ತಜ್ಞರು ಹಾಗೂ ಪುರಾತತ್ವ ಇಲಾಖೆಯ ನಿವೃತ್ತ ನಿರ್ದೇಶಕರಾದ ಪದ್ಮಶ್ರೀ ಡಾ. ಕೆ. ಮೊಹಮ್ಮದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪುರಾತತ್ವ ಇಲಾಖೆಯ ಅಧೀಕ್ಷಕ ರಮೇಶ ಮೂಲೀಮನಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ಜುಪಿಷಾನ್ ಹಕ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹುಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ವೈಭವ:

ಕಲಾಧಾರಾ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಸುಕನ್ಯಾ ರಾಮಗೋಪಾಲ್ ಅವರು ಘಟವಾದನದ ಮೂಲಕ ಸಂಗೀತ ರಸದೌತಣ ನೀಡಿದರು. ವಾಣಿ ಮಂಜುನಾಥ್ ಕೊಳಲುವಾದನ ನಡೆಸಿದರೆ, ರಂಜನಿ ವೆಂಕಟೇಶ ಮೃದಂಗ ಹಾಗೂ ರತ್ನಶ್ರೀ ಅಯ್ಯರ್ ತಬಲಾದಲ್ಲಿ ಸಾಥ್ ನೀಡಿದರು.
ನಂತರ ಡಾ. ಸಂಜಯ್ ಶಾಂತಾರಾಮ್ ಮತ್ತು ತಂಡದ ಕಲಾವಿದರು ಕುಚಿಪುಡಿ ನೃತ್ಯ ಪ್ರದರ್ಶಿಸಿ ಕಲಾರಸಿಕರನ್ನು ರಂಜಿಸಿದರು.