
ಬೆಂಗಳೂರು, ನ. ೯-ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿರುವ ಕುರಿತು ಕರ್ನಾಟಕ ಸರ್ಕಾರ ನಡೆಸಿರುವ ಪರೀಕ್ಷೆ ಹಾಗೂ ವರದಿಗೆ ನಾವು ಬದ್ಧರಾಗಿದ್ದೇವೆ. ವರದಿಯಲ್ಲಿನ ಅಂಶಗಳು ಸರಿಯಾಗಿವೆ. ರಾಜ್ಯ ಸರ್ಕಾರ ಜನರ ಹಿತದೃಷ್ಟಿಯಿಂದ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಕೇಂದ್ರ ಸರ್ಕಾರವೇ ಗಂಭೀರವಾಗಿ ಪರಿಗಣಿಸಿ ಸೂಕ್ತ ಉತ್ತರ ನೀಡಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ಒತ್ತಾಯಿಸಿದರು.
ವಿಕಾಸ ಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಶುಕ್ರವಾರ ರಾಜ್ಯ ಸರ್ಕಾರದ ಕಾನೂನು ಮಾಪನ ಹಾಗೂ ಅಳತೆ ಇಲಾಖೆಯ (ಲೀಗಲ್ ಮೆಟ್ರಾಲಜಿ) ಮೂಲಕ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು ಪರೀಕ್ಷಿಸಲಾಗಿತ್ತು. ಪರೀಕ್ಷೆಯ ಫಲಿತಾಂಶವನ್ನು ರಾಜ್ಯದ ಜನರ ಮುಂದಿಡಲಾಗಿದೆ. ಈ ವಿಚಾರ ಈಗ ಇಡೀ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ ಎಂದರು.
ಸ್ಯಾಂಪಲ್ ಪರೀಕ್ಷೆ ನಿಯಮಾನುಸಾರ
ರಾಜ್ಯ ಸರ್ಕಾರ ನಡೆಸಿದ ಪರೀಕ್ಷೆಯ ಸ್ಯಾಂಪಲಿಂಗ್ ಸರಿಯಾಗಿಲ್ಲ ಎಂಬ ತೈಲ ಕಂಪನಿಗಳ ಆರೋಪವನ್ನು ತಳ್ಳಿಹಾಕಿದ ರಿಜ್ವಾನ್ ಅರ್ಷದ್, ಪ್ರತಿ ಸ್ಯಾಂಪಲ್ಗಳನ್ನು ಸಂಬಂಧಪಟ್ಟವರಿಗೆ ನೀಡಿ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ಎಥೆನಾಲ್ ಪ್ರಮಾಣ, ಸಾಂದ್ರತೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ನಿಯಮಾನುಸಾರ ನಡೆಸಲಾಗಿದೆ. ನಮ್ಮ ಪರೀಕ್ಷೆಯ ವರದಿಯನ್ನು ಪ್ರಶ್ನಿಸುವವರು ಅದರ ವೈಜ್ಞಾನಿಕ ಆಧಾರವನ್ನು ಪರಿಶೀಲಿಸಬೇಕು ಎಂದರು.
ಕಳೆದ ಮೂರು ದಿನಗಳಿಂದ ತೈಲ ಕಂಪನಿಗಳು ತಮ್ಮ ಪೆಟ್ರೋಲ್ ಬಂಕ್ಗಳಲ್ಲಿ ಹೈಡ್ರೋಮೀಟರ್ ಬಳಸಿ ಸ್ಥಳದಲ್ಲಿಯೇ ಎಥೆನಾಲ್ ಪ್ರಮಾಣ ಪರೀಕ್ಷಿಸುತ್ತಿವೆ. ಪರೀಕ್ಷೆ ನಡೆಸಿದ ಬಳಿಕ ಪೆಟ್ರೋಲ್ ಸರಿಯಾಗಿದೆ ಎಂದು ಹೇಳುತ್ತಿವೆ. ರಾಜ್ಯ ಸರ್ಕಾರದ ಪರೀಕ್ಷೆಗೆ ಬೆಲೆ ಇಲ್ಲವೆಂದು ಹೇಳುವ ಕಂಪನಿಗಳು, ತಮ್ಮದೇ ಸಿಬ್ಬಂದಿಯಿಂದ ಪರೀಕ್ಷೆ ನಡೆಸಿ ಅದನ್ನು ಸಮರ್ಥಿಸಿಕೊಳ್ಳುತ್ತಿವೆ. ಇದು ಸರಿಯಾದ ವಿಧಾನವೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ವರದಿಯನ್ನು ತಳ್ಳಿಹಾಕುವ ಬದಲು ಕಂಪನಿಗಳು ಸ್ಯಾಂಪಲ್ಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕಿತ್ತು. ನಾವು ಅವುಗಳನ್ನು ಪರೀಕ್ಷಿಸಿ ಸೂಕ್ತ ಉತ್ತರ ನೀಡುತ್ತಿದ್ದೆವು. ಆದರೆ, ತಮ್ಮದೇ ಅಧಿಕಾರಿಗಳಿಂದ ಪರೀಕ್ಷೆ ನಡೆಸಿ ರಾಜ್ಯ ಸರ್ಕಾರದ ವರದಿ ತಪ್ಪು ಎಂದು ಹೇಳುವುದು ಸಮರ್ಪಕವಲ್ಲ ಎಂದರು.
ಎಥೆನಾಲ್ ಮಿಶ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಸ್ವಾರ್ಥದಿಂದ ಕಾರ್ಯನಿರ್ವಹಿಸುತ್ತಿಲ್ಲ. ಜನರ ಆರೋಗ್ಯ, ವಾಹನಗಳ ಸುರಕ್ಷತೆ ಮತ್ತು ಇಂಧನದ ಗುಣಮಟ್ಟದ ಬಗ್ಗೆ ಕಾಳಜಿ ವಹಿಸುತ್ತಿದೆ. ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಮಾಹಿತಿ ನೀಡಬೇಕು. ರಾಜ್ಯ ಸರ್ಕಾರ ತನ್ನ ವರದಿಯ ಪರವಾಗಿ ನಿಲ್ಲಲಿದೆ ಎಂದು ಅವರು ಹೇಳಿದರು. ಎಥೆನಾಲ್ ಪರೀಕ್ಷೆಗೆ ಈಗ ಜಂಟಿ ಪರಿಶೀಲನೆಯ ನಾಟಕವೇಕೆ?
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ಕರ್ನಾಟಕ ಸರ್ಕಾರ ನಡೆಸಿರುವ ಪರೀಕ್ಷೆಯ ವರದಿ ಬಹಿರಂಗವಾದ ಬಳಿಕ ಜಂಟಿ ಪರಿಶೀಲನೆಗೆ ಆಹ್ವಾನಿಸುತ್ತಿರುವ ಕೇಂದ್ರ ಹಾಗೂ ತೈಲ ಕಂಪನಿಗಳ ಕ್ರಮವನ್ನು ಸಚಿವ ರಿಜ್ವಾನ್ ಅರ್ಷದ್ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ೬೩ ಸ್ಯಾಂಪಲ್ಗಳನ್ನು ಕಳುಹಿಸಿದಾಗ ಜಂಟಿ ಪರಿಶೀಲನೆಗೆ ಏಕೆ ಆಹ್ವಾನಿಸಲಿಲ್ಲ? ಈಗ ವರದಿ ಬಹಿರಂಗವಾದ ಬಳಿಕ ಜಂಟಿ ಪರೀಕ್ಷೆಯ ಪ್ರಸ್ತಾಪ ಮಾಡುತ್ತಿರುವುದರ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು.
ತೈಲ ಕಂಪನಿಗಳು ಈಗ ಜಂಟಿ ಪರಿಶೀಲನೆ ಮಾಡೋಣ ಬನ್ನಿ ಎಂದು ಹೇಳುತ್ತಿವೆ. ಆದರೆ, ನಾವು ಮೊದಲೇ ೬೩ ಸ್ಯಾಂಪಲ್ಗಳನ್ನು ಕಳುಹಿಸಿದಾಗ ಜಂಟಿ ಪರಿಶೀಲನೆಗೆ ಏಕೆ ಕರೆದಿರಲಿಲ್ಲ. ಆಗ ಪರಿಶೀಲನೆಗೆ ಅವಕಾಶ ನೀಡದೆ, ಈಗ ವರದಿ ಬಹಿರಂಗವಾದ ಬಳಿಕ ಬಂದು ಜಂಟಿ ಪರೀಕ್ಷೆ ಮಾಡೋಣ ಎಂದು ಹೇಳುವುದರಲ್ಲಿ ಅರ್ಥವೇನು ಅಷ್ಟರೊಳಗೆ ಮಿಶ್ರಣದ ಪ್ರಮಾಣವನ್ನು ಸರಿಪಡಿಸಿಕೊಂಡು ಶೇ.೨೦ಕ್ಕೆ ಇಳಿಸಿ ಪರೀಕ್ಷೆಗೆ ಬನ್ನಿ ಎಂದರೆ ನಮಗೂ ಸಾಮಾನ್ಯ ಜ್ಞಾನ ಇದೆ ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ನಡೆಸಿರುವ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವವರು ಮೊದಲು ಪರೀಕ್ಷೆಯ ಪ್ರಕ್ರಿಯೆ ಮತ್ತು ಸ್ಯಾಂಪಲ್ಗಳ ಸಂಗ್ರಹದ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ನಿಯಮಾನುಸಾರ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದೆ. ಈಗ ಜಂಟಿ ಪರಿಶೀಲನೆಯ ಪ್ರಸ್ತಾಪ ಮಾಡುವುದಕ್ಕಿಂತ ಮೊದಲಿನಿಂದಲೇ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಬೇಕಿತ್ತು ಎಂದು ಹೇಳಿದರು.
ದೇಶದಲ್ಲಿ ಪ್ರತಿದಿನ ಕೋಟ್ಯಂತರ ಜನರು ಪೆಟ್ರೋಲ್ ಬಳಸುತ್ತಿದ್ದಾರೆ. ವಿಶೇಷವಾಗಿ ಬಡವರು, ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದ ಜನರು ಇಂಧನದ ಗುಣಮಟ್ಟದಿಂದ ನೇರವಾಗಿ ಪರಿಣಾಮ ಎದುರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಜನರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಸಮಸ್ಯೆಯ ಕುರಿತು ಮಾತನಾಡಿದವರು ಯಾರೂ ಪರೀಕ್ಷೆ ನಡೆಸಿ ವರದಿಯನ್ನು ನೀಡಿರಲಿಲ್ಲ. ಕರ್ನಾಟಕ ಸರ್ಕಾರ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿ ವರದಿ ನೀಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಎತ್ತಿರುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರವೇ ಸ್ಪಷ್ಟ ಉತ್ತರ ನೀಡಬೇಕಿತ್ತು. ಆದರೆ, ತೈಲ ಕಂಪನಿಗಳಿಂದ ಪ್ರತಿಕ್ರಿಯೆ ನೀಡಿಸಲಾಗುತ್ತಿದೆ. ತೈಲ ಕಂಪನಿಗಳ ಉತ್ತರದಲ್ಲಿ ಎಥೆನಾಲ್ ಎಷ್ಟು ಪ್ರಮಾಣದಲ್ಲಿ ಮಿಶ್ರಣ ಮಾಡಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ಮಾತ್ರ ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ. ಎಥೆನಾಲ್ ಮಿಶ್ರಣವು ನಿಯಂತ್ರಿತ ಮತ್ತು ಸ್ವಯಂಚಾಲಿತ ಪ್ರಕ್ರಿಯೆ ಎಂದು ಕಂಪನಿಗಳು ಹೇಳುತ್ತಿವೆ. ಹಾಗಾದರೆ ಸ್ಥಳೀಯ ಪೆಟ್ರೋಲ್ ಡೀಲರ್ಗಳು ಈ ಪ್ರಕ್ರಿಯೆಯನ್ನು ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಆರು ಟರ್ಮಿನಲ್ಗಳಿದ್ದು, ಎಥೆನಾಲ್ ಮಿಶ್ರಣ ಪ್ರಕ್ರಿಯೆ ಅಲ್ಲಿಯೇ ನಡೆಯುತ್ತದೆ. ಅತಿಯಾದ ಮಿಶ್ರಣವಾಗಿದ್ದರೆ ಈ ಟರ್ಮಿನಲ್ಗಳಲ್ಲಿಯೇ ಆಗಿರಬೇಕು. ಇದು ಪೆಟ್ರೋಲ್ ಬಂಕ್ ಡೀಲರ್ಗಳ ಸಮಸ್ಯೆಯಲ್ಲ ಎಂದು ಸ್ಪಷ್ಟಪಡಿಸಿದರು.
ವಾಹನ ತಯಾರಿಕಾ ಕಂಪನಿಗಳ ಆತಂಕ
ಪೆಟ್ರೋಲ್ನಲ್ಲಿನ ಎಥೆನಾಲ್ ಪ್ರಮಾಣ ಹಾಗೂ ಅದರ ಗುಣಮಟ್ಟದ ಕುರಿತು ವಾಹನ ತಯಾರಿಕಾ ಕಂಪನಿಗಳೂ ಆತಂಕ ವ್ಯಕ್ತಪಡಿಸಿವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಸಂಸ್ಥೆಯು ೨೦೨೬ರ ಜುಲೈ ೧೮ರಂದು ಕೇಂದ್ರ ಸಚಿವರಿಗೆ ಪತ್ರ ಬರೆದಿತ್ತು. ಆದರೆ, ಕೆಲವೇ ದಿನಗಳಲ್ಲಿ ಆ ಪತ್ರವನ್ನು ಹಿಂಪಡೆಯಲಾಗಿದೆ ಎಂದು ರಿಜ್ವಾನ್ ಅರ್ಷದ್ ಆರೋಪಿಸಿದರು.
ಬಿಎಂಡಬ್ಲ್ಯು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಧೀಪ್ ಸಿಂಗ್ ಬ್ರಾರ್ ಅವರು, ಇಂತಹ ಪರಿಸ್ಥಿತಿಯಲ್ಲಿ ವಾಹನಗಳಿಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೊಡ್ಡ ವಾಹನ ತಯಾರಿಕಾ ಕಂಪನಿಗಳೇ ಆತಂಕ ವ್ಯಕ್ತಪಡಿಸಿದರೆ, ಮಧ್ಯಮ ವರ್ಗದ ಜನರು ಬಳಸುವ ವಾಹನಗಳ ಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.
ಆರ್. ಅಶೋಕ್ ಹೇಳಿಕೆಗೆ ತಿರುಗೇಟು
ಎಥೆನಾಲ್ ಪ್ರಮಾಣ ಪರೀಕ್ಷಿಸಲು ಕರ್ನಾಟಕದಲ್ಲಿ ಸೂಕ್ತ ಪ್ರಯೋಗಾಲಯವೇ ಇಲ್ಲ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಿಜ್ವಾನ್ ಅರ್ಷದ್, ಅಶೋಕ್ ಅವರಿಗೆ ರಾಜ್ಯದಲ್ಲಿ ಯಾವೆಲ್ಲ ಪ್ರಯೋಗಾಲಯಗಳಿವೆ ಎಂಬುದನ್ನು ಪ್ರತ್ಯೇಕವಾಗಿ ತಿಳಿಸಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಪರ್ಯಾಯ ಪರೀಕ್ಷಾ ವ್ಯವಸ್ಥೆಯ ಮೂಲಕವೇ ಪರಿಶೀಲನೆ ನಡೆಸಿದೆ. ಯಾವ ವಿಧಾನದಲ್ಲಿ ಪರೀಕ್ಷೆ ನಡೆಸಬೇಕು ಮತ್ತು ಯಾವ ಪ್ರಯೋಗಾಲಯದ ನೆರವು ಪಡೆಯಬೇಕು ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಶೋಕ್ ಅವರು ಯಾವ ಪಕ್ಷದಲ್ಲಿದ್ದಾರೋ ಅದೇ ಪಕ್ಷದ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಯೋಗಾಲಯದ ಮೂಲಕವೂ ಪರೀಕ್ಷೆ ನಡೆಸಲಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರದ ಪರೀಕ್ಷೆಯನ್ನು ಪ್ರಶ್ನಿಸುವುದು ಯಾವ ನ್ಯಾಯ ಎಂದು ಕೇಳಿದರು.
ಕುಮಾರಸ್ವಾಮಿ ಹೇಳಿಕೆಯನ್ನೇ ಉಲ್ಲೇಖಿಸಿ ಪ್ರಶ್ನೆ
ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಿಜ್ವಾನ್ ಅರ್ಷದ್, ಶೇ.೩೦ರಷ್ಟು ಎಥೆನಾಲ್ ಬಳಸುವ ಬಗ್ಗೆ ಇಲಾಖಾ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಹಾಗಾದರೆ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಸುಳ್ಳು ಹೇಳುತ್ತಿದ್ದಾರೆಯೇ? ಅವರ ಹೇಳಿಕೆಯನ್ನು ನಿರ್ಲಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ರಾಜಕೀಯ ಸಂಬಂಧಗಳು ಮತ್ತು ವೈಯಕ್ತಿಕ ನಂಟಿಗಿಂತ ರಾಷ್ಟ್ರದ ಜನರ ಹಿತಾಸಕ್ತಿ ಮುಖ್ಯವಾಗಬೇಕು. ಈ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರ ಮಾಡಬಾರದು. ಎಥೆನಾಲ್ ಮಿಶ್ರಣದ ಪ್ರಮಾಣ ಮತ್ತು ಅದರ ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲಿಸಿ ಜನರಿಗೆ ಸತ್ಯಾಂಶ ತಿಳಿಸಬೇಕು ಎಂದರು.
ನಷ್ಟ ಅನುಭವಿಸುವವರು ದೇಶದ ಜನರು
ಪೆಟ್ರೋಲ್ ಗುಣಮಟ್ಟದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ವಾಹನಗಳ ಎಂಜಿನ್ ಮತ್ತು ದುಬಾರಿ ಯಂತ್ರೋಪಕರಣಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಉತ್ತಮ ಗುಣಮಟ್ಟದ ಯಂತ್ರಗಳು ಹಾಳಾದರೆ ಅದರ ಆರ್ಥಿಕ ನಷ್ಟವನ್ನು ಭರಿಸಬೇಕಾಗಿರುವುದು ಸಾಮಾನ್ಯ ಜನರೇ. ವಾಹನಗಳನ್ನು ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮಧ್ಯಮ ವರ್ಗದ ಜನರು ಇಂತಹ ಸಮಸ್ಯೆಗಳಿಂದ ತೊಂದರೆ ಅನುಭವಿಸಬಾರದು.
ಎಥೆನಾಲ್ ಮಿಶ್ರಣದ ಪ್ರಮಾಣದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ರಾಜ್ಯ ಸರ್ಕಾರದ ವರದಿಯನ್ನು ರಾಜಕೀಯ ದೃಷ್ಟಿಯಿಂದ ನೋಡುವ ಬದಲು ಜನರ ಹಿತದೃಷ್ಟಿಯಿಂದ ಪರಿಶೀಲಿಸಬೇಕು. ಇದು ಕರ್ನಾಟಕ ಸರ್ಕಾರ ಮತ್ತು ತೈಲ ಕಂಪನಿಗಳ ನಡುವಿನ ಪ್ರತಿಷ್ಠೆಯ ಪ್ರಶ್ನೆಯಲ್ಲ; ದೇಶದ ಕೋಟ್ಯಂತರ ವಾಹನ ಸವಾರರು ಮತ್ತು ಗ್ರಾಹಕರ ಹಿತಕ್ಕೆ ಸಂಬಂಧಿಸಿದ ವಿಷಯ ಎಂದು ರಿಜ್ವಾನ್ ಅರ್ಷದ್ ಹೇಳಿದರು.
























