
ಬೆಂಗಳೂರು, ನ.೮- ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಐವರ ಮೃತದೇಹಗಳು ಪತ್ತೆಯಾದಂತಾಗಿದೆ. ಉಳಿದ ಇಬ್ಬರಾದ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳಿಗಾಗಿ ಶಿರಾಡಿ ಘಾಟ್ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಇದೇ ವೇಳೆ, ಪ್ರಕರಣದ ಆರೋಪಿ ಇಂದುಶೇಖರ್ನ ಕುಟುಂಬದ ಹಿನ್ನೆಲೆಯೂ ತನಿಖೆಯಲ್ಲಿ ಮುನ್ನೆಲೆಗೆ ಬಂದಿದೆ. ಆತನ ಅಣ್ಣ ಬೆಳತೂರು ರಮೇಶ್ ಕೂಡ ರೌಡಿಶೀಟರ್ ಆಗಿದ್ದು, ಎಂಟು ವರ್ಷಗಳ ಹಿಂದೆ ಸುಮಾರು ೧೫ ಕೋಟಿ ರೂ. ಮೌಲ್ಯದ ಜಮೀನಿನ ವಿಚಾರವಾಗಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಗತಿ ಬೆಳಕಿಗೆ ಬಂದಿದೆ. ಸಹೋದರರಿಬ್ಬರ ವಿರುದ್ಧದ ಗಂಭೀರ ಅಪರಾಧ ಪ್ರಕರಣಗಳ ವಿವರಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
ಮೈಸೂರಿನಲ್ಲಿ ದಂಪತಿಯ ಮೃತದೇಹ ಪತ್ತೆ
ಆರೋಪಿ ಇಂದುಶೇಖರ್ ನೀಡಿದ ಮಾಹಿತಿ ಆಧರಿಸಿ ಉತ್ತರ ವಿಭಾಗದ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
ಈ ಹಿಂದೆ ಏಳು ವರ್ಷದ ಬಾಲಕ ಪುನೀತ್ನ ಮೃತದೇಹ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು. ನಂತರ ತಮಿಳುನಾಡಿನ ಸೇಲಂನಲ್ಲಿ ಸುನೀತಾ ಮತ್ತು ರೂಪವತಿಯ ಮೃತದೇಹಗಳು ಪತ್ತೆಯಾಗಿದ್ದವು. ಇದೀಗ ಶಿವಕುಮಾರ್ ಮತ್ತು ದಿವ್ಯಾ ಅವರ ಮೃತದೇಹಗಳೂ ಪತ್ತೆಯಾಗಿವೆ.
ಸೇಲಂನಲ್ಲಿ ಸುನೀತಾ ಮತ್ತು ರೂಪವತಿಯ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದರೆ, ಶಿವಕುಮಾರ್ ಮತ್ತು ದಿವ್ಯಾ ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆ ಮೈಸೂರಿನಲ್ಲಿ ನಡೆಯಲಿದೆ. ನಾಲ್ವರು ಮೃತರ ಅಂತ್ಯಕ್ರಿಯೆಯನ್ನು ಒಂದೇ ಸ್ಥಳದಲ್ಲಿ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.
ಏಳು ಮಂದಿಯ ಪೈಕಿ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಆರೋಪಿ ನೀಡಿರುವ ಮಾಹಿತಿ ಪ್ರಕಾರ, ಇವರಿಬ್ಬರ ಮೃತದೇಹಗಳನ್ನು ಶಿರಾಡಿ ಘಾಟ್ ಪ್ರದೇಶದಲ್ಲಿ ಎಸೆಯಲಾಗಿದೆ ಎನ್ನಲಾಗಿದೆ. ಹೀಗಾಗಿ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇಂದುಶೇಖರ್ನ ವಿಚಾರಣೆಯನ್ನೂ ತೀವ್ರಗೊಳಿಸಲಾಗಿದ್ದು, ಪ್ರಕರಣದ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇಂದುಶೇಖರ್ ತನ್ನ ಅಪ್ರಾಪ್ತ ಮಗಳನ್ನೇ ಜನರನ್ನು ಬೆದರಿಸಲು ಮತ್ತು ಬ್ಲ್ಯಾಕ್ಮೇಲ್ ಮಾಡಲು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ತನ್ನ ನಡವಳಿಕೆಯನ್ನು ಪ್ರಶ್ನಿಸುವವರ ವಿರುದ್ಧ ಅಥವಾ ವಿವಾದಗಳಲ್ಲಿ ಎದುರು ನಿಲ್ಲುವವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮನೆಯ ಸಮೀಪ ಕಾರು ನಿಲುಗಡೆ ವಿಚಾರವಾಗಿ ವಿವಾದ ಉಂಟಾದಾಗ, ಚಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸುವುದಾಗಿ ಇಂದುಶೇಖರ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಇಂದುಶೇಖರ್ ಮತ್ತು ಆತನ ಮಗಳನ್ನು ವಿಚಾರಣೆ ನಡೆಸಿದ್ದರು. ಆರೋಪಗಳಿಗೆ ಆಧಾರವಿಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.
ಕಾರಿನ ಮೇಲೆ ೧೪,೯೦೦ ರೂ. ದಂಡ ಬಾಕಿ
ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಇಟಿಯೋಸ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರ ಮೇಲೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ೧೪,೯೦೦ ರೂ. ದಂಡ ಬಾಕಿ ಇರುವುದು ಪತ್ತೆಯಾಗಿದೆ. ಕಾರಿನೊಳಗೆ ಗಂಧದ ಪರಿಮಳದ ಸುಗಂಧ ದ್ರವ್ಯಗಳು ಮತ್ತು ಗುಲಾಬಿ ನೀರಿನ ಹಲವು ಬಾಟಲಿಗಳೂ ಸಿಕ್ಕಿವೆ. ಮೃತದೇಹಗಳನ್ನು ಸಾಗಿಸುವಾಗ ಉಂಟಾಗುವ ದುರ್ವಾಸನೆಯನ್ನು ಮರೆಮಾಚಲು ಇವುಗಳನ್ನು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಒಂದೆಡೆ ಮೃತದೇಹಗಳ ಪತ್ತೆಗಾಗಿ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಶೋಧ ಮುಂದುವರಿದಿದ್ದರೆ, ಮತ್ತೊಂದೆಡೆ ಆರೋಪಿ ಕುಟುಂಬದ ಹಿಂದಿನ ಅಪರಾಧ ಪ್ರಕರಣಗಳ ವಿವರಗಳೂ ತನಿಖೆಯ ಭಾಗವಾಗಿವೆ. ಉಳಿದ ಇಬ್ಬರ ಮೃತದೇಹಗಳ ಪತ್ತೆ ಹಾಗೂ ಇಂದುಶೇಖರ್ ವಿಚಾರಣೆಯಿಂದ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬರುವ ನಿರೀಕ್ಷೆಯಿದೆ.
ಇಂದು ಶೇಖರನಿಗೆ ಅಣ್ಣನೆ ರೋಲ್ ಮಾಡೆಲ್
ಇಂದುಶೇಖರ್ನ ಅಣ್ಣ ಬೆಳತೂರು ರಮೇಶ್ ಕೂಡ ಕಾಡುಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ವರ್ತೂರು ಭಾಗದಲ್ಲಿ ಭೂಮಾಫಿಯಾ ಚಟುವಟಿಕೆ ನಡೆಸುತ್ತಿದ್ದ ಎನ್ನಲಾದ ರಮೇಶ್, ಬೆಳತೂರಿನ ನಂಜಪ್ಪ ಎಂಬುವರಿಗೆ ಸೇರಿದ ೧.೮ ಎಕರೆ ಜಮೀನನ್ನು ಕಬಳಿಸಲು ಸಂಚು ರೂಪಿಸಿದ್ದ ಆರೋಪ ಎದುರಿಸಿದ್ದ.
ಸುಮಾರು ೧೫ ಕೋಟಿ ರೂ. ಮೌಲ್ಯದ ಈ ಜಮೀನನ್ನು ತನ್ನದಾಗಿಸಿಕೊಳ್ಳಲು ವೆಂಕಟರಮಣ ಎಂಬಾತನನ್ನು ಕರೆತಂದು ನಂಜಪ್ಪ ಎಂದು ಬಿಂಬಿಸಿ, ಆತನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿಲ್ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ ಕೃಷ್ಣಪ್ಪ (೬೫) ಎಂಬಾತನನ್ನು ಬಳಸಿಕೊಂಡು ನಕಲಿ ಗುರುತಿನ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು. ಆತನ ಸಾವಿನ ಬಳಿಕ ನಂಜಪ್ಪ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರವನ್ನೂ ಸೃಷ್ಟಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಈ ಕೃತ್ಯದಲ್ಲಿ ರಮೇಶ್ನ ತೋಟದ ಭದ್ರತಾ ಸಿಬ್ಬಂದಿಯಾಗಿದ್ದ ವೆಂಕಟಸ್ವಾಮಿ ಕೂಡ ಭಾಗಿಯಾಗಿದ್ದ ಎನ್ನಲಾಗಿದೆ. ಘಟನೆ ಕುರಿತು ವೆಂಕಟಸ್ವಾಮಿ ತನ್ನ ಪತ್ನಿ ಸುಧಾರಾಣಿಗೆ ತಿಳಿಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸುಧಾರಾಣಿ, ರಮೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು. ಇದೇ ವಿಚಾರವಾಗಿ ಸುಧಾರಾಣಿಯನ್ನು ಮನೆಯಲ್ಲೇ ಬೆಂಕಿ ಹಚ್ಚಿ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಪೊಲೀಸರ ತನಿಖೆಯಲ್ಲಿ ಅದು ಕೊಲೆ ಎಂಬುದು ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳತೂರು ರಮೇಶ್ ಮತ್ತು ವೆಂಕಟಸ್ವಾಮಿಯನ್ನು ಬಂಧಿಸಲಾಗಿತ್ತು.
ನಕಲಿ ದಾಖಲೆ ಸೃಷ್ಟಿ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ರಮೇಶ್ ವಿರುದ್ಧ ದಾಖಲಾಗಿದ್ದವು. ಸುಮಾರು ಮೂರು ವರ್ಷ ಜೈಲಿನಲ್ಲಿದ್ದ ಆತ ೨೦೨೧ರಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದ.























