
ಬೀದರ್: ತಾಲ್ಲೂಕಿನ ಬುಧೇರಾ ಗ್ರಾಮದಿಂದ ಯಾಕತಪುರ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕ ಆಗ್ರಹಿಸಿದೆ.
ತಾಲ್ಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಅವರ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ನಿಯೋಗದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಆರು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಸ್ಥಳದಲ್ಲಿ ಕರ್ನಾಟಕ ಪಾರದರ್ಶಕತೆ ಕಾಯ್ದೆ ಪ್ರಕಾರ ಕಾಮಗಾರಿ ಅಂದಾಜು ಮೊತ್ತದ ನಾಮಫಲಕ ಹಾಕಲಾಗಿಲ್ಲ ಎಂದು ದೂರಿದರು.
ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಪಘಾತಗಳಿಗೂ ಕಾರಣವಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬುಧೇರಾ, ಸಾತೋಳಿ ಹಾಗೂ ಯಾಕತಪುರ ಗ್ರಾಮಸ್ಥರೊಂದಿಗೆ ಬುಧೇರಾದಿಂದ ಬೀದರ್ನ ಲೋಕೋಪಯೋಗಿ ಇಲಾಖೆ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು. ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಅಟಕಾರ್, ಪ್ರಮುಖರಾದ ಅಜಯಕುಮಾರ ಭಂಗೂರೆ, ತುಕ್ಕಪ್ಪ ಭಂಗೂರೆ, ವಿಠ್ಠಲ ರಾಯಗೊಂಡ, ಸಂತೋಷ್ ಜಾಮ್ಮ ಮತ್ತಿತರರು ಇದ್ದರು.























