Home ಜಿಲ್ಲೆ ಕೆಇಬಿ ಹನುಮಾನ ಮಂದಿರ ಬಳಿ ವೈಭವದ ನವರಾತ್ರಿ ಉತ್ಸವ

ಕೆಇಬಿ ಹನುಮಾನ ಮಂದಿರ ಬಳಿ ವೈಭವದ ನವರಾತ್ರಿ ಉತ್ಸವ

ಬೀದರ್: ನವರಾತ್ರಿ ಉತ್ಸವದ ಅಂಗವಾಗಿ ನಗರದ ಕೆಇಬಿ ಹನುಮಾನ ಮಂದಿರದ ಬಳಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ದುರ್ಗಾದೇವಿ (ಅಂಬಾ ಭವಾನಿ) ಮಂಟಪದಲ್ಲಿ ದುರ್ಗಾಷ್ಟಮಿ ಹಾಗೂ ಮಹಾನವಮಿ ನಿಮಿತ್ತ ನವಚಂಡಿ ಯಾಗ, ಕುಂಕುಮಾರ್ಚನೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು.

ಜೈ ಭಾರತ ಮಾತಾ ಸೇವಾ ಸಮಿತಿ, ಭಾರತೀಯ ಗೋ ಪರಿವಾರ ಹಾಗೂ ವೈಷ್ಣೋದೇವಿ ಶಕ್ತಿ ಪೀಠದ ವತಿಯಿಂದ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ದೇವಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಭಾರತೀಯ ಗೋ ಪರಿವಾರದ ಜಿಲ್ಲಾ ಸಮಿತಿ ಅಧ್ಯಕ್ಷರೂ ಆಗಿರುವ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಅವರ ನೇತೃತ್ವದಲ್ಲಿ ಕಳೆದ ಒಂಬತ್ತು ದಿನಗಳಿಂದ ಹೋಮ-ಹವನ, ಯಾಗ, ಅಭಿಷೇಕ, ಕನ್ಯಾಪೂಜೆ, ದೀಪ ಗರ್ಭಾ ಉತ್ಸವ ಹಾಗೂ ಭಕ್ತಿ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿವೆ. ಮಂಗಳವಾರ ಉತ್ಸವಕ್ಕೆ ತೆರೆ ಬೀಳಲಿದೆ.

ದುರ್ಗಾಷ್ಟಮಿ ನಿಮಿತ್ತ ರೋಹಿತ್ ಗುರೂಜಿ ಅವರ ನೇತೃತ್ವದಲ್ಲಿ ನವಚಂಡಿ ಯಾಗ ಹಾಗೂ ಕುಂಕುಮಾರ್ಚನೆ ಸಂಪ್ರದಾಯಬದ್ಧವಾಗಿ ನೆರವೇರಿದವು. ದೇವಿ ಮಹಾತ್ಮೆ ಪಠಣ, ಚಂಡಿಕಾ ದೇವಿ ಸ್ತುತಿ, ಮಂತ್ರೋಚ್ಚಾರಣೆ ಹಾಗೂ ಶಾಸ್ತ್ರೋಕ್ತ ಹೋಮದ ಮೂಲಕ ದೇವಿಯ ಆರಾಧನೆ ಮಾಡಲಾಯಿತು. ಲೋಕಕಲ್ಯಾಣ, ಉತ್ತಮ ಮಳೆ-ಬೆಳೆ, ಸಮಾಜದಲ್ಲಿ ಶಾಂತಿ-ಸಮೃದ್ಧಿ ಹಾಗೂ ಸಕಲರ ಒಳಿತಿಗಾಗಿ ಸಂಕಲ್ಪಿಸಿ ಯಾಗ ನಡೆಸಲಾಯಿತು.

ಕುಂಕುಮಾರ್ಚನೆ ಕಾರ್ಯಕ್ರಮವೂ ಭಕ್ತರ ಗಮನ ಸೆಳೆಯಿತು. ಕೊಲ್ಲಾಪುರದ ಮಹಾಲಕ್ಷ್ಮಿ ಮಂದಿರದಿಂದ ತರಿಸಲಾದ ಶ್ರೀಚಕ್ರ ಸಮೇತ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಿಯ ವಿವಿಧ ನಾಮಗಳನ್ನು ಉಚ್ಚರಿಸುತ್ತ ಕುಂಕುಮ ಅರ್ಪಿಸಿದ ಭಕ್ತರು ಕುಟುಂಬದ ಸುಖ-ಶಾಂತಿ, ಸೌಭಾಗ್ಯ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಸೋಮವಾರ ನಡೆದ ಮಹಾನವಮಿ ಹೋಮದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಅವರ ಪುತ್ರಿ ಶಿವಾನಿ ಪಾಲ್ಗೊಂಡರು. ವೀರಶೆಟ್ಟಿ ಖ್ಯಾಮಾ, ರಾಜೇಶ್ವರಿ ಖ್ಯಾಮಾ, ಭೀಮಣ್ಣ ಸೋರಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ದುರ್ಗಾಷ್ಟಮಿ ನಿಮಿತ್ತ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಸೇರಿದಂತೆ ಹಲವರು ಆಗಮಿಸಿ ದೇವಿಯ ದರ್ಶನ ಪಡೆದರು.

ನವರಾತ್ರಿ ಪರಂಪರೆಯ ಸಂರಕ್ಷಣೆ ಅಗತ್ಯ: ವೀರಶೆಟ್ಟಿ ಖ್ಯಾಮಾ

ನವರಾತ್ರಿಯು ಆದಿಶಕ್ತಿ ದುರ್ಗಾದೇವಿಯ ಒಂಬತ್ತು ಸ್ವರೂಪಗಳನ್ನು ಆರಾಧಿಸುವ ಪವಿತ್ರ ಹಬ್ಬವಾಗಿದೆ. ದುಷ್ಟಶಕ್ತಿಗಳ ವಿರುದ್ಧ ದೈವಿಕ ಶಕ್ತಿಯ ವಿಜಯವನ್ನು ಸ್ಮರಿಸುವ ಈ ಹಬ್ಬವು ಭಾರತೀಯ ಸಂಸ್ಕøತಿ, ಧಾರ್ಮಿಕ ನಂಬಿಕೆ ಹಾಗೂ ಆಧ್ಯಾತ್ಮಿಕ ಪರಂಪರೆಯೊಂದಿಗೆ ಆಳವಾದ ಸಂಬಂಧ ಹೊಂದಿದೆ. ಈ ಹಬ್ಬದ ವೈಶಿಷ್ಟ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನವಚಂಡಿ ಯಾಗ, ಕುಂಕುಮಾರ್ಚನೆ ಹಾಗೂ ಹೋಮ-ಹವನ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ತಿಳಿಸಿದರು.

ಧಾರ್ಮಿಕ ಆಚರಣೆಗಳಿಂದ ಆಧ್ಯಾತ್ಮಿಕ ಮೌಲ್ಯಗಳ ಅರಿವು: ರೋಹಿತ್ ಗುರೂಜಿ

ಧಾರ್ಮಿಕ ಆಚರಣೆಗಳು ದೇವಿಯ ಆರಾಧನೆಯ ಜೊತೆಗೆ ಸನಾತನ ಪರಂಪರೆಯ ಮೌಲ್ಯಗಳನ್ನು ತಿಳಿಯಲು ಸಹಕಾರಿಯಾಗುತ್ತವೆ. ನವರಾತ್ರಿಯು ಶಕ್ತಿ, ಭಕ್ತಿ, ಧರ್ಮ ಹಾಗೂ ಸತ್ಯದ ಮಹತ್ವವನ್ನು ಅರಿಯುವ ಪವಿತ್ರ ಸಂದರ್ಭವಾಗಿದೆ. ನವಚಂಡಿ ಯಾಗವು ಮನುಷ್ಯನಲ್ಲಿ ಧೈರ್ಯ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಹಾಗೂ ಧರ್ಮನಿಷ್ಠೆಯನ್ನು ಬೆಳೆಸುವ ಆಧ್ಯಾತ್ಮಿಕ ಆಚರಣೆಯಾಗಿದೆ ಎಂದು ರೋಹಿತ್ ಗುರೂಜಿ ಹೇಳಿದರು.