
ಕಲಬುರಗಿ,ಅ.15-ಜಗದ್ಗುರು ಮಧ್ವಾಚಾರ್ಯರ ಜಯಂತಿ ಆಚರಣೆಗೆ ಸರ್ಕಾರದಿಂದ ಆದೇಶ ಹೊರಬಿದ್ದಿದೆ. ಇದು ಅತ್ಯಂತ ಐತಿಹಾಸಿಕ ನಿರ್ಧಾರ. ಈ ಆದೇಶಕ್ಕೆ ಕಾರಣರಾದಂತಹ ಸಿಎಂ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಾಶ ಪಾಟೀಲ್, ಡಾ. ಅಜಯ್ ಸಿಂಗ್ ಸೇರಿದಂತೆ ಸರ್ಕಾರದ ಎಲ್ಲಾ ಸಂಪುಟ ಸಚಿವರಿಗೆ ಅಭಿನಂದಿಸಿ ಈ ಆದೇಶವನ್ನು ಸ್ವಾಗತಿಸೋದಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಜಿಲ್ಲಾ ಬ್ರಾಹ್ಮಣ ಸಂಘ, ಕಲಬುರಗಿ ಹಾಗೂ ಶ್ರೀ ಸತ್ಯಾತ್ಮಸೇನೆ, ಕಲಬುರಗಿ ಇವುಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಜಗದ್ಗುರು ಮಧ್ವಾಚಾರ್ಯರ ಜಯಂತಿಯನ್ನು ಪ್ರತಿವರ್ಷ ಅಕ್ಟೋಬರ್ 21ರಂದು ರಾಜ್ಯ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಆಚರಿಸಲು ನಿರ್ಧರಿಸಿರುವುದು ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ವಿಷಯವಾಗಿದೆ.
ಈ ಮಹತ್ವದ ನಿರ್ಧಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಹಾಗೂ ಈ ಪ್ರಯತ್ನಕ್ಕೆ ಸಹಕಾರ ನೀಡಿದ ಎಲ್ಲ ಜನಪ್ರತಿನಿಧಿಗಳಿಗೆ ಸಮಸ್ತ ಬ್ರಾಹ್ಮಣ ಸಮಾಜದ ಪರವಾಗಿ ಹಾಗೂ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದು ಅಲ್ಲಂಪ್ರಭು ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಕೇವಲ ಒಂದು ಜಯಂತಿಯ ಆಚರಣೆಯಲ್ಲ; ಜ್ಞಾನ, ಭಕ್ತಿ, ಧರ್ಮ ಹಾಗೂ ಮಧ್ವಾಚಾರ್ಯರ ಮಹಾನ್ ಆಧ್ಯಾತ್ಮಿಕ ಪರಂಪರೆಗೆ ಸಲ್ಲುತ್ತಿರುವ ಗೌರವವಾಗಿದೆ. ಜಗದ್ಗುರು ಮಧ್ವಾಚಾರ್ಯರ ದ್ವೈತ ಸಿದ್ಧಾಂತ, ತತ್ವಜ್ಞಾನ ಹಾಗೂ ಧಾರ್ಮಿಕ ಆದರ್ಶಗಳು ನಾಡಿನಾದ್ಯಂತ ಪಸರಿಸಿ, ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸುತ್ತೇನೆಂದೂ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
.























