Home ಜಿಲ್ಲೆ ಕಲಬುರಗಿ ಮನೆಗೊಂದು ಮರ ಊರಿಗೊಂದು ವನ : ದೊಡ್ಡಮನಿ

ಮನೆಗೊಂದು ಮರ ಊರಿಗೊಂದು ವನ : ದೊಡ್ಡಮನಿ

ಕಲಬುರಗಿ,ಸೆ.25-ಮನೆಗೊಂದು ಮರ,ಗ್ರಾಮಕ್ಕೊಂದು ವನ ಎನ್ನುವುದು ನಮ್ಮೆಲ್ಲರ ಅಭಿಯಾನ ಆಗಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಜನ್ಮದಿನವನ್ನು ಆಚರಿಸುತ್ತಾರೆ. ಯುವಜನತೆ ಜನ್ಮದಿನದ ಅಂಗವಾಗಿ ಸಾರ್ವಜನಿಕ ಸ್ಥಳದಲ್ಲಿ ಗಿಡಗಳನ್ನು ನೆಡಬೇಕು. ಗಿಡ ಮರಗಳು ಪಕ್ಷಿ, ಪ್ರಾಣಿಗಳು ಮತ್ತು ಮನುಷ್ಯರಿಗೆ ನೆರವಾಗಿವೆ ಎಂದು ಕಲ್ಯಾಣ ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಾ.ಚಂದ್ರಶೇಖರ ದೊಡ್ಡಮನಿ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ (ಎಂ ಪಿ ಎಚ್ ಎಸ್) ನಲ್ಲಿ ಹಮ್ಮಿಕೊಂಡ ಎನ್‍ಎಸ್‍ಎಸ್ ಸಂಸ್ಥಾಪನ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗಾಂಧೀಜಿಯ ಸರಳತೆ, ಪ್ರಾಮಾಣಿಕತೆ ಮತ್ತು ಸರ್ವೋದಯ ಸಮಾಜದ ನಿರ್ಮಾಣದ ದೃಷ್ಟಿಕೋನದಲ್ಲಿ ಸ್ಥಾಪನೆಯಾದ ಎನ್‍ಎಸ್‍ಎಸ್ ಇಂದು ದೇಶದಲ್ಲಿ ಸುಮಾರು ಎರಡು ಕೋಟಿ ಸ್ವಯಂಸೇವಕರನ್ನು ಹೊಂದಿದೆ. ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಮತ್ತು ರಾಷ್ಟ್ರ ನಿರ್ಮಾಣದ ಜನ ಜಾಗೃತಿ, ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶಿಕ್ಷಣದ ಜೊತೆಗೆ ಸಮಾಜ ಸೇವೆ ಮಾಡುವ ಸಂಕಲ್ಪ ಹೊಂದಬೇಕು. ಮೌಲ್ಯ ಮತ್ತು ನೈತಿಕತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ದೇವಿದಾಸ್ ಪವಾರ ವಹಿಸಿದ್ದರು. ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಸಂತೋಷ್ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿತಾಂಬರ್ ರಾವ್ ಮೇತ್ರೆ, ಸಂಗೀತ ಕಪೂರ್, ಸುಭಾಷ್ ಚಂದ್ರ ಆರ್, ಮಾರುತಿ ಬೇಂದ್ರೆ, ದತ್ತಾತ್ರೇಯ, ಶಿವಕುಮಾರ್, ಸವಿತಾ ನಾಟೇಕರ್, ಶಾಹಿನ್ ಕೌಸರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.