Home ಜಿಲ್ಲೆ ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಯಾವಾಗ?ಸರಣಿ ಪ್ರಕರಣಗಳ ಕುರಿತು ಸರ್ಕಾರ ಸ್ಪಷ್ಟ ಉತ್ತರ ನೀಡಲಿ: ಹಣಮಂತ...

ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಯಾವಾಗ?ಸರಣಿ ಪ್ರಕರಣಗಳ ಕುರಿತು ಸರ್ಕಾರ ಸ್ಪಷ್ಟ ಉತ್ತರ ನೀಡಲಿ: ಹಣಮಂತ ಇಟಗಿ

ಯಾದಗಿರಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಮೇಲೆ ಜಾತಿ ಆಧಾರಿತ ದೌರ್ಜನ್ಯ, ಕೊಲೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ವರದಿಯಾಗುತ್ತಿದ್ದು, ಇಂತಹ ಘಟನೆಗಳ ತಡೆಗೆ ಸರ್ಕಾರ ಮತ್ತು ಗೃಹ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಮಾದಿಗ, ಸಮಗಾರ, ಡೋಹರ, ದಕ್ಕಲಿಗ ಹಾಗೂ ಮೋಚಿಗಾರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ, ನಗರಸಭೆ ಮಾಜಿ ಸದಸ್ಯ ಹಣಮಂತ ಇಟಗಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದವರ ಮೇಲೆ ನಡೆದಿವೆ ಎನ್ನಲಾದ ಹಲವು ಗಂಭೀರ ಘಟನೆಗಳು ಆತಂಕಕ್ಕೆ ಕಾರಣವಾಗಿವೆ. ಪ್ರತಿಯೊಂದು ಪ್ರಕರಣವನ್ನೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ರಕ್ಷಣೆ ಹಾಗೂ ಕಾನೂನು ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.

ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಭೂಮಾನಂದ ಅವರ ಕೊಲೆ, ರಮೇಶ ನಕ್ಕುಂದಿ ಅವರ ಕೊಲೆ, ಈಚನಾಳದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿದೆ ಎನ್ನಲಾದ ಪ್ರಕರಣ, ವಕ್ರಾಣಿ-ಸಿರವಾರದಲ್ಲಿ ಅಶ್ವಿನಿ ಛಲವಾದಿ ಅವರ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪ ಹಾಗೂ ಲಿಂಗಸೂರಿನ ಕರಡಕಲ್‍ನಲ್ಲಿ ರೇಣಮ್ಮ ಅವರ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪ ಸೇರಿದಂತೆ ವಿವಿಧ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದರು.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಜತ್ತಿಯಲ್ಲಿ ಮಹಾದೇವಮ್ಮ ಅವರ ಕೊಲೆ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಊಡಗಿಯಲ್ಲಿ ಯುವಕನ ಕೊಲೆ ಹಾಗೂ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ ಗುಡ್ಡದಲ್ಲಿ ಇಬ್ಬರು ಯುವಕರ ಮೇಲೆ ಜಾತಿ ನಿಂದನೆ ಮತ್ತು ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ 17 ವರ್ಷದ ಬಾಲಕ ಮೃತಪಟ್ಟಿರುವ ಪ್ರಕರಣದ ಬಗ್ಗೆಯೂ ಸಮಗ್ರ ತನಿಖೆ ನಡೆಸಿ, ಘಟನೆಯ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಸಮುದಾಯದ ಪರವಾಗಿ ಧ್ವನಿ ಎತ್ತುತ್ತಿರುವ ಟಿ. ನರಸೀಪುರದ ಯೂಟ್ಯೂಬರ್ ಮಂಜುನಾಥ್ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಕುರಿತು ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉಲ್ಲೇಖಿಸಲಾದ ಪ್ರಕರಣಗಳಲ್ಲಿ ಎಷ್ಟು ಎಫ್‍ಐಆರ್‍ಗಳು ದಾಖಲಾಗಿವೆ, ಎಷ್ಟು ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ, ಎಷ್ಟು ಆರೋಪಿಗಳನ್ನು ಬಂಧಿಸಲಾಗಿದೆ, ಎಷ್ಟು ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಹಾಗೂ ಪ್ರಸ್ತುತ ತನಿಖೆ ಮತ್ತು ನ್ಯಾಯಾಲಯದ ಹಂತವೇನು ಎಂಬ ಮಾಹಿತಿಯನ್ನು ಸರ್ಕಾರ ಸಾರ್ವಜನಿಕವಾಗಿ ತಿಳಿಸಬೇಕು ಎಂದು ಇಟಗಿ ಆಗ್ರಹಿಸಿದರು.

ತನಿಖೆಯಲ್ಲಿ ವಿಳಂಬವಾಗಿದ್ದರೆ ಅದರ ಕಾರಣವೇನು, ಕರ್ತವ್ಯ ಲೋಪ ಅಥವಾ ನಿರ್ಲಕ್ಷ್ಯ ಕಂಡುಬಂದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ, ಸಂತ್ರಸ್ತ ಕುಟುಂಬಗಳಿಗೆ ಕಾನೂನುಬದ್ಧ ಪರಿಹಾರ, ಪುನರ್ವಸತಿ ಹಾಗೂ ಪೆÇಲೀಸ್ ರಕ್ಷಣೆ ನೀಡಲಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.

2023ರಿಂದ 2026ರವರೆಗೆ ರಾಜ್ಯದಲ್ಲಿ ದಾಖಲಾಗಿರುವ ಎಸ್‍ಸಿ/ಎಸ್‍ಟಿ ದೌರ್ಜನ್ಯ ಪ್ರಕರಣಗಳ ಜಿಲ್ಲಾವಾರು ಅಂಕಿ-ಅಂಶ, ಎಫ್‍ಐಆರ್, ಅನ್ವಯಿಸಲಾದ ಕಾನೂನು, ಬಂಧನ, ತನಿಖೆಯ ಸ್ಥಿತಿ, ಆರೋಪಪಟ್ಟಿ ಹಾಗೂ ನ್ಯಾಯಾಲಯದ ಹಂತದ ಮಾಹಿತಿಯನ್ನು ಒಳಗೊಂಡ ಶ್ವೇತಪತ್ರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಜಾತಿ ದೌರ್ಜನ್ಯ ಪ್ರಕರಣಗಳ ತನಿಖೆ ತ್ವರಿತಗೊಳಿಸಲು ಅಗತ್ಯವಿದ್ದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು. ಅಪರಾಧ ನಡೆದ ಬಳಿಕ ಕ್ರಮ ಕೈಗೊಳ್ಳುವುದರ ಜತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟುವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದರು.

ಗೃಹ ಸಚಿವರು ಎಸ್‍ಸಿ/ಎಸ್‍ಟಿ ಸಮುದಾಯದ ಪ್ರತಿನಿಧಿಗಳು, ದಲಿತ ಸಂಘಟನೆಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ, ಸಮುದಾಯದ ಸುರಕ್ಷತೆ ಹಾಗೂ ದೌರ್ಜನ್ಯ ತಡೆಗೆ ಸರ್ಕಾರ ಕೈಗೊಳ್ಳಲಿರುವ ಕಾರ್ಯಯೋಜನೆಯನ್ನು ಸ್ಪಷ್ಟಪಡಿಸಬೇಕು ಎಂದು ಇಟಗಿ ಒತ್ತಾಯಿಸಿದರು.
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ
ಬಸವರಾಜ್ ಮೇಟಿ ನಾಯ್ಕಾಲ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳು ಹಾಗೂ ಸುರಕ್ಷತೆ ಸಂವಿಧಾನಾತ್ಮಕ ಹೊಣೆಗಾರಿಕೆಯಾಗಿದೆ. ಸಂಘಟನೆಗಳ ಬೇಡಿಕೆಗಳಿಗೆ ಸೂಕ್ತ ಕಾಲಮಿತಿಯಲ್ಲಿ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು. ಮುಂದಿನ ಹಂತದಲ್ಲಿ ರಾಜ್ಯಮಟ್ಟದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಸವರಾಜ್ ಮೇಟಿ ನಾಯ್ಕಾಲ್, ಶಿವರಾಜ್ ದಾಸನಕೇರಿ, ಅನಿಲ್ ಕುಮಾರ್ ಕರಾಟೆ ಹಾಗೂ ಚಂದ್ರು ಕಡೆಸೂರು ಉಪಸ್ಥಿತರಿದ್ದರು.