
ತಾಳಿಕೋಟೆ: ನಾಗರಬೆಟ್ಟದ ಆಕ್ಸ್ಫರ್ಡ ಪಾಟೀಲ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈ ಸಾಲಿನ ವೈದ್ಯಕೀಯ ಪ್ರವೇಶದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 225ಕ್ಕೂ ಅಧಿಕ ವಿದ್ಯಾರ್ಥಿಗಳು ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೀಟ್ ಪರೀಕ್ಷೆಯ ಫಲಿತಾಂಶದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 2020ರಿಂದ ಸಂಸ್ಥೆಯಿಂದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, 2020ರಲ್ಲಿ 85, 2021ರಲ್ಲಿ 123, 2022ರಲ್ಲಿ 145, 2023ರಲ್ಲಿ 156, 2024ರಲ್ಲಿ 172 ಹಾಗೂ ಈ ವರ್ಷ ಸುಮಾರು 225ಕ್ಕೂ ಅಧಿಕ ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟು ಪಡೆದಿದ್ದಾರೆ. ಇದುವರೆಗೆ ಸಂಸ್ಥೆಯಿಂದ ಸುಮಾರು 1,450 ವಿದ್ಯಾರ್ಥಿಗಳು ಎಂಬಿಬಿಎಸ್ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದರು.
ಇದರ ಜೊತೆಗೆ ಈ ವರ್ಷ 240ಕ್ಕೂ ಅಧಿಕ ವಿದ್ಯಾರ್ಥಿಗಳು ಬಿಎಎಂಎಸ್ ಹಾಗೂ ಸುಮಾರು 60ರಿಂದ 70 ವಿದ್ಯಾರ್ಥಿಗಳು ಪಶುವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದರು.
ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲೂ ಪ್ರವೇಶ
ಈ ವರ್ಷದ 225ಕ್ಕೂ ಅಧಿಕ ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಏಮ್ಸ್ನಲ್ಲಿ 3, ಬೆಂಗಳೂರಿನ ಬಿಎಂಸಿಯಲ್ಲಿ 18, ಮೈಸೂರಿನ ಎಂಎಂಸಿಯಲ್ಲಿ 6, ಹುಬ್ಬಳ್ಳಿಯ ಕಿಮ್ಸ್ನಲ್ಲಿ 21, ಬೆಳಗಾವಿಯ ವೀಮ್ಸ್ನಲ್ಲಿ ಸುಮಾರು 36, ಬಳ್ಳಾರಿ ವೀಮ್ಸ್ನಲ್ಲಿ 15, ಗದಗ ಜಿಮ್ಸ್ನಲ್ಲಿ 16, ರಾಯಚೂರು ರಿಮ್ಸ್ನಲ್ಲಿ 10, ಕಲಬುರಗಿ ಜಿಮ್ಸ್ನಲ್ಲಿ 12, ಕೊಪ್ಪಳದಲ್ಲಿ 12, ಕಾರವಾರದಲ್ಲಿ 13 ಹಾಗೂ ಬೀದರ್ ಮತ್ತು ಹಾವೇರಿ ಸೇರಿದಂತೆ ವಿವಿಧ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ವಿವರಿಸಿದರು.
150 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಈ ಸಾಧನೆಯ ಮತ್ತೊಂದು ವಿಶೇಷವೆಂದರೆ, ವೈದ್ಯಕೀಯ ಪ್ರವೇಶ ಪಡೆದ 225ಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ ಸುಮಾರು 150 ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಎರಡುರಿಂದ ಮೂರು ವರ್ಷಗಳ ಕಾಲ ಉಚಿತವಾಗಿ ಶಿಕ್ಷಣ ಪಡೆದಿದ್ದಾರೆ. ಅವರಿಂದ ಯಾವುದೇ ಶುಲ್ಕ ಪಡೆಯದೆ ಶಿಕ್ಷಣ ನೀಡಲಾಗಿದೆ. ಅಲ್ಲದೆ, ಪ್ರತಿವರ್ಷ 40ರಿಂದ 50 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ವ್ಯಾಸಂಗಕ್ಕಾಗಿ ತಲಾ 40 ಸಾವಿರದಿಂದ 50 ಸಾವಿರದವರೆಗೆ ಸಂಸ್ಥೆಯಿಂದ ಸಹಾಯಧನ ನೀಡಲಾಗುತ್ತಿದೆ. ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಪುಸ್ತಕಗಳು ಸೇರಿದಂತೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಥಿಯರಿ ಫಲಿತಾಂಶದ ಜೊತೆಗೆ ನೀಟ್, ಸಿಇಟಿ, ಜೆಇಇಗೆ ಒತ್ತು
ಪೆÇೀಷಕರು ತಮ್ಮ ಮಕ್ಕಳಿಗೆ ಪಿಯುಸಿ ಪ್ರವೇಶ ನೀಡುವ ಸಂದರ್ಭದಲ್ಲಿ ಕೇವಲ ಥಿಯರಿ ಫಲಿತಾಂಶವನ್ನಷ್ಟೇ ಪರಿಗಣಿಸದೆ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿನ ಸಂಸ್ಥೆಯ ಸಾಧನೆಯನ್ನೂ ಗಮನಿಸಬೇಕು ಎಂದು ಅವರು ಸಲಹೆ ನೀಡಿದರು. ಸಿಇಟಿ, ನೀಟ್ ಹಾಗೂ ಜೆಇಇ ಪರೀಕ್ಷೆಗಳು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಮತ್ತು ವೃತ್ತಿಜೀವನಕ್ಕೆ ಪ್ರಮುಖವಾಗಿವೆ. ಕೇವಲ ಥಿಯರಿ ಫಲಿತಾಂಶ ಉತ್ತಮವಾಗಿರುವುದರಿಂದ ಮಾತ್ರ ಸಾಲದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಫೌಂಡೇಶನ್ ತರಬೇತಿಯೂ ಮುಖ್ಯವಾಗಿದೆ ಎಂದು ಹೇಳಿದರು. ನೀಟ್, ಜೆಇಇ, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು ಮಾಡಲು ಅವಕಾಶವಿಲ್ಲ. ಇಂತಹ ಪರೀಕ್ಷೆಗಳು ತಂತ್ರಜ್ಞಾನ ಆಧಾರಿತ ಹಾಗೂ ಕಟ್ಟುನಿಟ್ಟಿನ ನಿಯಮಗಳಡಿ ನಡೆಯುತ್ತವೆ. ಆದ್ದರಿಂದ ಫಲಿತಾಂಶಗಳ ಕುರಿತು ಆಧಾರರಹಿತವಾಗಿ ನಕಲು ನಡೆದಿದೆ ಎಂಬ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ನಾಗರಬೆಟ್ಟಕ್ಕೆ ಹೆಮ್ಮೆ ತಂದ ಸಾಧನೆ
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದಂತಹ ಗ್ರಾಮೀಣ ಪ್ರದೇಶದಿಂದ ಒಂದೇ ಸಂಸ್ಥೆಯ 225ಕ್ಕೂ ಅಧಿಕ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಗ್ರಾಮೀಣ ಮತ್ತು ರೈತ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸಿದರೆ ಅವರು ಕೂಡ ಉನ್ನತ ಸಾಧನೆ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಹೇಳಿದರು. ಪ್ರಸ್ತುತ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಲ್ಲಿ 160ಕ್ಕೂ ಅಧಿಕ ಮಂದಿ ರೈತ ಕುಟುಂಬಗಳಿಗೆ ಸೇರಿದವರಿದ್ದಾರೆ. ಬರಗಾಲ, ಮಳೆ ಕೊರತೆ ಹಾಗೂ ಕೃಷಿ ಸಂಕಷ್ಟದ ನಡುವೆಯೂ ರೈತ ಕುಟುಂಬಗಳ ಮಕ್ಕಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ಕುಟುಂಬಗಳಿಗೆ ಮಹತ್ವದ ಬದಲಾವಣೆ ತರಬಲ್ಲ ಸಾಧನೆಯಾಗಿದೆ ಎಂದು ತಿಳಿಸಿದರು.
ಮುದ್ದೇಬಿಹಾಳ, ಬಾಗಲಕೋಟೆಯಲ್ಲೂ ವಿಸ್ತರಣೆ
ನಾಗರಬೆಟ್ಟದ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳನ್ನು ಮುದ್ದೇಬಿಹಾಳಕ್ಕೂ ವಿಸ್ತರಿಸಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿಯೂ ಆಕ್ಸ್ಫರ್ಡ್ ಹೆಸರಿನಲ್ಲಿ ಹೊಸ ಶಾಖೆ ಆರಂಭಿಸಲಾಗಿದೆ. 2026-27ನೇ ಸಾಲಿನಲ್ಲಿ ಬಾಗಲಕೋಟೆ ಶಾಖೆಯಿಂದ ಮೊದಲ ವರ್ಷದಲ್ಲೇ ಸುಮಾರು 25ರಿಂದ 30 ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣಕ್ಕೆ ಕಳುಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಮುಂದಿನ ವರ್ಷ ನಾಗರಬೆಟ್ಟ ಶಾಖೆಯಿಂದ 250ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣಕ್ಕೆ ಕಳುಹಿಸುವ ಗುರಿ ಹೊಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲಾಗುವುದು ಎಂದು ಆಡಳಿತಾಧಿಕಾರಿ ಅಮೀತ್ಗೌಡ ಪಾಟೀಲ ಅವರು ತಿಳಿಸಿದರು.
ಸಂಸ್ಥೆಯ ಸಾಧನೆಗೆ ಸಹಕರಿಸಿದ ಪೆÇೀಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರವನ್ನು ಅವರು ಸ್ಮರಿಸಿದರು.
ಈ ಸಮಯದಲ್ಲಿ ಟಿ.ಎಸ್.ದೇಸಾಯಿ, ರೇವಣಸಿದ್ದ ಚಲವಾದಿ, ವಿನಯ ಪಾಟೀಲ ಉಪಸ್ಥಿತರಿದ್ದರು.
ಒಬ್ಬ ವಿದ್ಯಾರ್ಥಿ ವೈದ್ಯನಾದರೆ ಆತನ ಕುಟುಂಬದ ಬದುಕಿನಲ್ಲಿ ದೊಡ್ಡ ಬದಲಾವಣೆ ಉಂಟಾಗುತ್ತದೆ. ವಿಶೇಷವಾಗಿ ರೈತ ಕುಟುಂಬಗಳ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವುದು ಗ್ರಾಮೀಣ ಸಮಾಜದ ಪ್ರಗತಿಗೆ ಸಹಕಾರಿಯಾಗಲಿದೆ. ಶಿಕ್ಷಣದ ಮೂಲಕ ಸಮಾಜದ ಕಟ್ಟಕಡೆಯ ಕುಟುಂಬಗಳ ಮಕ್ಕಳಿಗೂ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ.
ಅಮೀತಗೌಡ ಪಾಟೀಲ ಆಕ್ಸಫರ್ಡ ಪಾಟೀಲ
ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು.























