
ಕಲಬುರಗಿ,ಆ.24: ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮತ್ತು ಸ್ಥಳೀಯ ಪ್ರತಿಭೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗುರುವಾರದಿಂದ ಆರಂಭವಾಗೊಂಡ ಕಲಬುರಗಿ ಸ್ಪೋರ್ಟ್ಸ್ ಹಬ್ಬ-2026 ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಚಾಲನೆ ನೀಡಿದರು.
ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಸಹಯೋಗದೊಂದಿಗೆ ನಡೆದ ಸರಳ ಸಮಾರಂಭದಲ್ಲಿ ಸುಮಾರು 12.50 ಲಕ್ಷ ರೂ. ಪ್ರಾಯೋಜಕತ್ವ ಕ್ರೀಡಾಕೂಟದ ಜರ್ಸಿ ಅನಾವರಣಗೊಳಿಸಿದಲ್ಲದೆ ಆರಂಭಿಕ ವಾಲಿಬಾಲ್ ಪಂದ್ಯಕ್ಕೆ ಸರ್ವಿಸ್ ಮಾಡುವ ಮೂಲಕ ಡಿ.ಸಿ. ಚಾಲನೆ ನೀಡಿದರು.
ಇದಕ್ಕು ಮುನ್ನ ಮಾತನಾಡಿದ ಡಿ.ಸಿ. ಅವರು ಸ್ಥಳೀಯ ಕ್ರೀಡಾಪಟುಗಳ ಹುರಿದುಂಬಿಸಲೆಂದೆ ನೆಕ್ಸ್ಟ್ ಫೌಂಡೇಷನ್ ಕ್ರೀಡಾಕೂಟ ಆಯೋಜಿಸಿದೆ. ವಿವಿಧ ಮಾದರಿಯ 7 ಕ್ರೀಡೆಗಳು 4 ದಿನಗಳ ಕಾಲ ನಡೆಯಲಿದ್ದು, ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಭಾಗವಹಿಸಬೇಕೆಂದು ಕರೆ ನೀಡಿದ ಅವರು, ಮುಂದಿನ ಬಾರಿ ಇನ್ನು ಹೆಚ್ಚು ಕ್ರೀಡೆಗಳನ್ನು ಇದರಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು ಎಂದರು.
ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾತನಾಡಿ ಸ್ಥಳೀಯ ಕ್ರೀಡಾಪಟುಗಳಲ್ಲಿನ ಪ್ರತಿಭೆ ಗುರುತಿಸಲು ಸ್ಪೋರ್ಟ್ಸ್ ಹಬ್ಬ ದೊಡ್ಡ ವೇದಿಕೆಯಾಗಿ ಪರಿಣಮಿಸಲಿದೆ. ಯುವಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಸ್ಪ್ರೆಂಜೋ ಸಂಸ್ಥೆ ಮತ್ತು ಸ್ಥಳೀಯ ಕ್ರೀಡಾ ಅಸೋಸಿಯೇಷನ್ಗಳ ಸಹಯೋಗದಲ್ಲಿ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಪಂದ್ಯಗಳು ನಡೆಯಲಿವೆ. ಅದೇ ರೀತಿ ಸರ್ಕಾರ ಪದವಿ ಕಾಲೇಜಿನ ಆವರಣದಲ್ಲಿ ಕ್ರಿಕಿಟ್, ಎಂ.ಎಸ್.ಐ. ಪದವಿ ಪೂರ್ವ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಚೆಸ್, ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಫುಟ್ಬಾಲ್ ಪಂದ್ಯಗಳು ಜರುಗಲಿವೆ.
ಸೆ.27ಕ್ಕೆ ಸೈಕ್ಲೋಥಾನ್:
ಕ್ರೀಡಾ ಹಬ್ಬದ ಭಾಗವಾಗಿ ಭಾನುವಾರ (ಸೆ.27) ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಸೈಕ್ಲೋಥಾನ್ ಗೆ ಚಾಲನೆ ನೀಡಲಾಗುತ್ತದೆ. ಅಲ್ಲಿಂದ ಜಗತ್ ವೃತ್ತ- ಸರ್ಕಾರಿ ವಸ್ತು ಸಂಗ್ರಹಾಲಯ-ಖರ್ಗೆ ಪೆಟ್ರೋಲ್ ಪಂಪ್ ಸರ್ಕಲ್-ಬುದ್ದ ವಿಹಾರ-ಖರ್ಗೆ ಪೆಟ್ರೊಲ್ ಪಂಪ್ ಸರ್ಕಲ್-ಜಯದೇವ ಹೃದ್ರೋಗ ಆಸ್ಪತ್ರೆ-ಮಿನಿ ವಿಧಾನಸೌಧ ಮೂಲಕ ಚಂಪಾ ಕ್ರೀಡಾಂಗಣಕ್ಕೆ ಬಂದು ಸಂಪನ್ನಗೊಳ್ಳಲಿದೆ.
ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಗುಪ್ತಚರ ವಿಭಾಗದ ಎಸ್.ಪಿ ಸ್ವಪ್ನಿಲ್ ಮಾನೆ, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಪಿ. ಶಾಲು, ಸಹಾಯಕ ಅಯುಕ್ತೆ ರಿತಿಕಾ ವರ್ಮಾ, ಸ್ಪ್ರೆಂಜೋ ಸಂಸ್ಥೆಯ ಪ್ರವೃತ್, ಕ್ರಿಕೆಟ್ ಅಸೋಸಿಯೇಷನ್ ನ ಜೈಭೀಮ ಧರ್ಗಿ, ಚೆಸ್ ಅಸೋಸಿಯೇಷನ್ ನ ಪ್ರಮೋದ ಮೌರ್ಯ, ಪುಟ್ಬಾಲ್ ಅಸೋಸಿಯೇಷನ್ ನ ಮಂಜುನಾಥ, ವಾಲಿಬಾಲ್ ಅಸೋಸಿಯೇಷನ್ ನ ಬಾಬರ್ ಖಾನ್, ಸೈಕ್ಲಿಂಗ್ ಅಸೋಸಿಯೇಷನ್ ನ ಸುರೇಶ ದೇಸಾಯಿ, ಕ್ರೀಡಾ ಇಲಾಖೆಯ ಪ್ರವೀಣ ಪುಣೆ, ಸಂಜಯ್ ಬಾಣದ ಸೇರಿದಂತೆ ಇನ್ನಿತರರು ಇದ್ದರು. ಸ್ಪೋರ್ಟ್ಸ್ ಹಬ್ಬದ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಸಂಗಮೇಶ ಸರ್ವರನ್ನು ಸ್ವಾಗತಿಸಿದರು.






















