
ಮುದ್ದೇಬಿಹಾಳ: ಜಾತಿ, ಪಂಗಡಗಳ ಎಲ್ಲೆಗಳನ್ನು ಮೀರಿ ಮಾನವೀಯತೆ, ಪ್ರೀತಿ, ತ್ಯಾಗ ಹಾಗೂ ಸಮಾನತೆಯ ಮೌಲ್ಯಗಳನ್ನು ಸಾರಿದ ಪ್ರವಾದಿ ಮಹಮ್ಮದ್ ಪೈಗಂಬರರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್‍ಅಲಿ ಉಡುಪಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್ ಸೀರತ್ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರವಾದಿ ಮಹಮ್ಮದ್ ಅವರ ಸಂದೇಶಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಸಮಾಜದಲ್ಲಿನ ಅಸಮಾನತೆ, ಬಡತನ ಹಾಗೂ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದ ಅವರು, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಬದುಕಿನ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲ ಧರ್ಮಗಳ ಸಾರವೂ ಮಾನವೀಯತೆ, ಪ್ರೀತಿ, ಶಾಂತಿ ಹಾಗೂ ಸಹಬಾಳ್ವೆಯಾಗಿದೆ ಎಂದರು.
ಓಂ ಶಾಂತಿ ಭವನದ ಬಿ.ಕೆ. ರೇಣುಕಾ ಅಕ್ಕನವರು ಮಾತನಾಡಿ, ಪ್ರವಾದಿ ಮಹಮ್ಮದ್ ಅವರು ಜಾತಿ-ಧರ್ಮದ ಭೇದಗಳನ್ನು ಮೀರಿ ಪ್ರೀತಿ, ತ್ಯಾಗ ಹಾಗೂ ಮಾನವೀಯತೆಯ ಸಂದೇಶ ಸಾರಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಉತ್ತಮ ಪರಿವರ್ತನೆ ತಂದುಕೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಫಾದರ್ ಸುನಿಲ್ ಮಾತನಾಡಿ, ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಸರ್ವಧರ್ಮ ಸಮನ್ವಯದ ಆಶಯವನ್ನು ಅರ್ಥಮಾಡಿಕೊಂಡು ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ ಹಾಗೂ ಸಹೋದರತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಎಂ.ಜಿ.ವಿ.ಸಿ. ಕಾಲೇಜಿನ ಪ್ರಾಧ್ಯಾಪಕ ಪೆÇ್ರ. ಆರ್.ಎಚ್. ಸಜ್ಜನ, ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ಸಂಚಾಲಕ ನೂರೇನಬಿ ನದಾಫ ಹಾಗೂ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಚಾಲಕ ನಾಸಿರ್ ಹುಸೇನ್ ಅವರು ಪ್ರವಾದಿ ಮಹಮ್ಮದ್ ಅವರ ಜೀವನ, ಆದರ್ಶ ಹಾಗೂ ಸಂದೇಶಗಳ ಕುರಿತು ಮಾತನಾಡಿದರು.
ಈ ಸಮಯದಲ್ಲಿ ವಿವಿಧ ಧರ್ಮಗಳ ಮುಖಂಡರು, ಗಣ್ಯರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.






















