Home ಮುಖಪುಟ ಸುದ್ದಿ ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು: ಮೂವರ ಸಾವು

ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು: ಮೂವರ ಸಾವು

ಮುಂಬೈ, ಸೆ.೨೦- ಮುಂಬೈನ ಕೋಸ್ಟಲ್ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ ಸುಮಾರು ೫.೨೦ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಮರೈನ್ ಡ್ರೈವ್‌ನಿಂದ ಹಾಜಿ ಅಲಿ ಕಡೆಗೆ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ವೇಗವಾಗಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಸೇತುವೆಯಿಂದ ಕೆಳಗೆ ಬಿದ್ದಿದೆ ಎಂದು ಕೋಸ್ಟಲ್ ರೋಡ್ ನಿಯಂತ್ರಣ ಕೊಠಡಿ ಮಾಹಿತಿ ನೀಡಿದೆ.

ಅಪಘಾತದ ವೇಳೆ ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಅವರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಕಾರು ಐವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿರುವ ಬಗ್ಗೆಯೂ ಪ್ರಾಥಮಿಕ ಅಪಘಾತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗಾಯಗೊಂಡ ನಾಲ್ವರನ್ನು ಚಿಕಿತ್ಸೆಗಾಗಿ ನಾಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಗುರುತು ಪತ್ತೆಯಾಗದ ಸುಮಾರು ೨೦ ವರ್ಷದ ಯುವಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದು, ಟ್ರಾಮಾ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ನಿಖರ ಕಾರಣ ಹಾಗೂ ಮೃತರು ಮತ್ತು ಗಾಯಾಳುಗಳ ಸಂಪೂರ್ಣ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಆಧರಿಸಿ ತನಿಖೆ ಮುಂದುವರಿದಿದೆ.