Home ಜಿಲ್ಲೆ ಕಲಬುರಗಿ ಗಣೇಶಮೂರ್ತಿ ತರಲು ಹೋದ ವೇಳೆ ದುರ್ಘಟನೆ ಬೈಕ್ ರೇಸಿಂಗ್: ಒಬ್ಬ ಯುವಕ ಸಾವು, ಮೂವರಿಗೆ ಗಂಭೀರ...

ಗಣೇಶಮೂರ್ತಿ ತರಲು ಹೋದ ವೇಳೆ ದುರ್ಘಟನೆ ಬೈಕ್ ರೇಸಿಂಗ್: ಒಬ್ಬ ಯುವಕ ಸಾವು, ಮೂವರಿಗೆ ಗಂಭೀರ ಗಾಯ

ಕಲಬುರಗಿ,ಸೆ.15-ಗಣೇಶ ಚತುರ್ಥಿ ಅಂಗವಾಗಿ ಗಣೇಶಮೂರ್ತಿ ತರಲು ಹೋದ ಸಂದರ್ಭದಲ್ಲಿ ಬೈಕ್ ರೇಸಿಂಗ್ ಮಾಡುತ್ತಿದ್ದ ವೇಳೆ ಬಿದ್ದು ಯುವಕನೊಬ್ಬ ಮೃತಪಟ್ಟು, ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೀರಾಪುರದ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಸೇತುವೆ ಬಳಿ ಸೋಮವಾರ ಸಾಯಂಕಾಲ ನಡೆದಿದೆ.
ಕೋಟನೂರ (ಡಿ) ಗ್ರಾಮದ ಪ್ರಶಾಂತ್ ತಂದೆ ಶಿವರಾಜ ಪೊಲೀಸ್ ಬಿರಾದಾರ (19) ಎಂಬಾತ ಮೃತಪಟ್ಟಿದ್ದು, ನಿಂಗರಾಜ ತಂದೆ ಮಲ್ಲಿಕಾರ್ಜುನ ಪೂಜಾರಿ (23), ಸಿದ್ಧರಾಮ ತಂದೆ ಬಸವರಾಜ ಬಿರಾದಾರ (21), ಸಚಿನ್ ತಂದೆ ಈರಣ್ಣ ಸಾತಿಹಾಳ (19) ಎಂಬುವವರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಣೇಶಮೂರ್ತಿ ಚತುರ್ಥಿ ಅಂಗವಾಗಿ ಕೋಟನೂರ (ಡಿ)ಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಇವರು ಕೋಟನೂರ (ಡಿ) ಗ್ರಾಮದಿಂದ ಹೀರಾಪುರ ಕಡೆಗೆ ಬೈಕ್ ಮೇಲೆ ಹೊರಟಿದ್ದರು. ಈ ವೇಳೆ ಬೈಕ್ ರೇಸಿಂಗ್ ಮಾಡುವಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ನಾಲ್ವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಪ್ರಶಾಂತ್ ಶಿವರಾಜ ಪೊಲೀಸ್ ಬಿರಾದಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಸಂಚಾರ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.