
ಸಂಜೆವಾಣಿ ವರದಿ ಫಲಶೃತಿ
ಅಫಜಲಪುರ,ಸೆ.15-ತಾಲೂಕಿನ ಚೌಡಾಪೂರ ಗ್ರಾಮದ ಶುಕ್ರವಾರ ಸಂತೆ ಕಟ್ಟೆ ರಸ್ತೆಯನ್ನು ದುರಸ್ತಿ ಮಾಡಲಾಗಿದ್ದು, ಇದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
“ಸಂಪೂರ್ಣ ಹದಗೆಟ್ಟ ಚೌಡಾಪೂರದ ಶುಕ್ರವಾರದ ಸಂತೆ ಕಟ್ಟೆ ರಸ್ತೆ: ಗ್ರಾಮಸ್ಥರ ಆಕ್ರೋಶ” ಎಂಬ ಶೀರ್ಷಿಕೆಯಡಿ “ಸಂಜೆವಾಣಿ” ಸೆಪ್ಟೆಂಬರ್ 12 ರಂದು ವರದಿ ಪ್ರಕಟವಾಗಿತ್ತು.
ಈ ವರದಿಯನ್ನು ಸ್ಥಳೀಯರು, ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಸ್ಥಳೀಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು.
ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು 2 ದಿನಗಳಲ್ಲಿಯೇ ಚರಂಡಿ ಮತ್ತು ರಸ್ತೆ ಕಾಮಗಾರಿ ದುರಸ್ತಿ ಮಾಡುವುದರ ಮೂಲಕ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಸಮಸ್ಯೆಯ ವರದಿ ಪ್ರಕಟಿಸುವುದರ ಮೂಲಕ ಅಧಿಕಾರಿಗಳ ಗಮನ ಸೆಳೆದ ಪತ್ರಿಕೆಯ ಕಾರ್ಯಕ್ಕೆ ಮತ್ತು ವರದಿಗೆ ಸ್ಪಂದಿಸಿ ರಸ್ತೆ ದುರಸ್ತಿಗೊಳಿಸಿದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಕಾರ್ಯಕ್ಕೆ ಗ್ರಾಮಸ್ಥರಾದ ಕಿರಣ ಕುಮಾರ ಸಣ್ಣೂರ, ಸುಭಾಸ್ ಪಾಟೀಲ್, ಹಣಮಂತರಾವ್ ಭಜಂತ್ರಿ ಹಾಗೂ ರಮೇಶ ಎಂ.ಜಮಾದಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





























