
ಬೆಂಗಳೂರು, ಸೆ.3- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿರುವ ನೇಮಕಾತಿ ಅಕ್ರಮದ ಆರೋಪಕ್ಕೆ ಗುರಿಯಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ಪಶು ವೈದ್ಯ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದಿನ ಪರೀಕ್ಷಾ ನಿಯಂತ್ರಕರೂ ಆಗಿದ್ಸ ಗ್ಯಾನೇಂದ್ರ ಅವರನ್ನು ಸಿಐಡಿ ಪೊಲೀಸರು ಭಾನುವಾರ ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರದಿಂದ ಗ್ಯಾನೇಂದ್ರ ಅಮಾನತು ಆದೇಶ ಹೊರಬಿದ್ದಿದೆ.
ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಹಗರಣ ಬೆಳಕಿಗೆ ಬರುತ್ತಿದ್ದಂತೆ ಐಎಎಸ್ ಅಧಿಕಾರಿ ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ನಂತರ ಅಧಿಕಾರಿ ಯನ್ನು ಸಿಐಡಿ ಕಸ್ಟಡಿಗೆ ಕೋರ್ಟ್ ನೀಡಿತು.
ಪ್ರಕರಣ ಸಂಬಂಧ ಈಗ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೂ ಸಿಐಡಿ ನೋಟಿಸ್ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದೆ.































