Home ಕ್ರೀಡೆ ರೋಹಿತ್ ನಿವೃತ್ತಿ ವದಂತಿಗೆ ತೆರೆ ; ಭಾರತೀಯ ಕ್ರಿಕೆಟ್ ಮಂಡಳಿಯಿಂದ ಸ್ಪಷ್ಟನೆ

ರೋಹಿತ್ ನಿವೃತ್ತಿ ವದಂತಿಗೆ ತೆರೆ ; ಭಾರತೀಯ ಕ್ರಿಕೆಟ್ ಮಂಡಳಿಯಿಂದ ಸ್ಪಷ್ಟನೆ

ನವದೆಹಲಿ, ಸೆಪ್ಟೆಂಬರ್ 3: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿ ಸಿ ಐ) ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಹಿರಿಯ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ನಿವೃತ್ತಿಯ ಕುರಿತು ಹಬ್ಬಿದ್ದ ಎಲ್ಲಾ ವದಂತಿಗಳು ಮತ್ತು ಊಹಾಪೋಹಗಳಿಗೆ ಬಲವಾದ ತೆರೆ ಎಳೆದಿದೆ. ರೋಹಿತ್ ಶರ್ಮಾ ಪ್ರಸ್ತುತ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಅನಗತ್ಯ ಊಹಾಪೋಹಗಳಿಗೆ ಹಾಗೂ ವದಂತಿಗಳಿಗೆ ಯಾರೂ ಆಹಾರ ನೀಡಬಾರದು ಎಂದು ಬಿಸಿ ಸಿ ಐ ಜಂಟಿ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.


ಬಿಸಿ ಸಿ ಐ ಆಯೋಜಿಸಿದ್ದ ಪ್ರಮುಖ ಪರಾಮರ್ಶೆ ಸಭೆಯ (ರಿವ್ಯೂ ಮೀಟಿಂಗ್) ವೇಳೆ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಕುರಿತು ಚರ್ಚೆ ನಡೆಯಲಿದೆ ಎಂಬ ವರದಿಗಳು ಕ್ರೀಡಾ ವಲಯದಲ್ಲಿ ಹರಿದಾಡುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ನಿರಂತರ ಊಹಾಪೋಹಗಳು ವ್ಯಕ್ತವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಬಿಸಿ ಸಿ ಐ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದು, ಇಂತಹ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿಸಿದೆ.


ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಬಿಸಿ ಸಿ ಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ, “ರೋಹಿತ್ ಶರ್ಮಾ ಅವರು ಮೈದಾನದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಅವರು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಮತ್ತು ಅತ್ಯಂತ ಜವಾಬ್ದಾರಿಯುತ ಆಟಗಾರರಾಗಿ ಮುಂದುವರಿದಿದ್ದಾರೆ. ಅವರ ನಿವೃತ್ತಿಯ ಬಗ್ಗೆ ಹರಿಯಬಿಡಲಾಗುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಷ್ಟೇ. ಇಂತಹ ಆಧಾರರಹಿತ ವದಂತಿಗಳಿಗೆ ಮತ್ತು ಕಲ್ಪನೆಗಳಿಗೆ ಯಾರೂ ಉತ್ತೇಜನ ಅಥವಾ ಆಹಾರ ನೀಡಬಾರದು” ಎಂದು ಖಡಕ್ ಆಗಿ ವಿನಂತಿಸಿಕೊಂಡಿದ್ದಾರೆ.


ಮುಂದಿನ ೨೦೨೭ರ ಏಕದಿನ ವಿಶ್ವಕಪ್ ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮತ್ತು ತಂಡದಲ್ಲಿ ಸ್ಥಾನ ಪಡೆಯುವ ಗುರಿಯನ್ನು ರೋಹಿತ್ ಶರ್ಮಾ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮ್ಮ ಫಿಟ್‌ನೆಸ್ ಹಾಗೂ ಬ್ಯಾಟಿಂಗ್ ಫಾರ್ಮ್ ಅನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿದ್ದಾರೆ. ಅವರ ಅನುಭವ ಮತ್ತು ಆಟದ ವೈಖರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.


ಭಾರತೀಯ ಕ್ರಿಕೆಟ್ ಮಂಡಳಿಯು ರೋಹಿತ್ ಶರ್ಮಾ ಅವರ ಕೊಡುಗೆಯನ್ನು ಶ್ಲಾಘಿಸಿದ್ದು, ಮುಂಬರುವ ಸರಣಿಗಳಲ್ಲಿ ಅವರು ಭಾರತ ತಂಡದ ಪರ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಭರವಸೆ ನೀಡಿದೆ. ಬಿಸಿ ಸಿ ಐ ನೀಡಿರುವ ಈ ಸ್ಪಷ್ಟನೆಯಿಂದಾಗಿ ರೋಹಿತ್ ಶರ್ಮಾ ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದ್ದ ಗೊಂದಲಗಳು ಮತ್ತು ಆತಂಕಗಳು ಸಂಪೂರ್ಣವಾಗಿ ದೂರವಾದಂತಾಗಿದೆ.