Home ಮುಖಪುಟ ಸುದ್ದಿ ಉ. ಪ್ರದೇಶದಲ್ಲಿ ಜಲಕಂಟಕ: ಮೂವರ ಸಾವು

ಉ. ಪ್ರದೇಶದಲ್ಲಿ ಜಲಕಂಟಕ: ಮೂವರ ಸಾವು

ಸಾವಿರಾರು ಜನರ ಸ್ಥಳಾಂತರ

ಲಖನೌ,ಸೆ.೩-ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದೆ. ರಾಜ್ಯಾದ್ಯಂತ ಮಳೆ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದು, ಈವರೆಗೆ ೧೬,೭೮೪ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಒಂದೇ ದಿನ ೩,೦೪೨ ಜನರನ್ನು ರಕ್ಷಣಾ ಪಡೆಗಳು ಸುರಕ್ಷಿತ ಸ್ಥಳಗಳಿಗೆ ಕರೆತಂದಿವೆ. ಪ್ರಸ್ತುತ ರಾಜ್ಯದ ೩೫ ಸಂತ್ರಸ್ತ ಜಿಲ್ಲೆಗಳ ಪೈಕಿ ೨೩ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರತಾಪ್‌ಗಢದಲ್ಲಿ ೧೮ ತಿಂಗಳ ಮಗು ಪ್ರಿಯಾಂಶ್ ಹಾಗೂ ಅಮ್ರೋಹಾದ ಗಜ್ರೌಲಾದಲ್ಲಿ ಶೇರಾ (೩೨) ಮತ್ತು ಸುರೇಶ್ (೫೫) ಎಂಬುವವರು ಮಳೆಗೆ ಬಲಿಯಾಗಿದ್ದಾರೆ.

ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ೧,೪೯೯ ಮೋಟಾರ್ ಬೋಟ್‌ಗಳನ್ನು ಬಳಸಲಾಗುತ್ತಿದೆ. ೧,೦೬೭ ವೈದ್ಯಕೀಯ ತಂಡಗಳು ಕಾರ್ಯಾಚರಣೆಯಲ್ಲಿದ್ದು, ಸಾಂಕ್ರಾಮಿಕ ರೋಗ ತಡೆಯಲು ೫ ಲಕ್ಷಕ್ಕೂ ಹೆಚ್ಚು ಕ್ಲೋರಿನ್ ಮಾತ್ರೆಗಳು ಹಾಗೂ ೧.೭೭ ಲಕ್ಷ ಒಆರ್‌ಎಸ್ (ಔಖS) ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ. ರಾಜ್ಯಾದ್ಯಂತ ೧,೩೧೧ ಪ್ರವಾಹ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಸದ್ಯ ೨೦೧ ಶಿಬಿರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಸಂತ್ರಸ್ತರಿಗೆ ೬೮,೦೦೦ಕ್ಕೂ ಹೆಚ್ಚು ಆಹಾರಧಾನ್ಯದ ಕಿಟ್‌ಗಳು ಹಾಗೂ ೩.೩೬ ಲಕ್ಷಕ್ಕೂ ಅಧಿಕ ಊಟದ ಪ್ಯಾಕೆಟ್‌ಗಳನ್ನು ನೀಡಲಾಗಿದೆ.

ವಾರಾಣಸಿ, ಪ್ರಯಾಗ್‌ರಾಜ್, ಅಯೋಧ್ಯೆ, ಗೋರಖ್‌ಪುರ, ಬಲ್ಲಿಯಾ, ಗಾಜಿಪುರ, ಬರೇಲಿ, ಲಖೀಂಪುರ್ ಖೇರಿ, ಪಿಲಿಭಿತ್, ಸಿಂಗ್ರೌಲಿ (ಸೋನ್ ಭದ್ರಾ), ಚಂದೌಲಿ, ಬಾರಾಬಂಕಿ, ಸೀತಾಪುರ ಸೇರಿದಂತೆ ೨೩ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಬಲ್ಲಿಯಾದಲ್ಲಿ ಗಂಗಾ ಮತ್ತು ಸರ್ಯೂ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ಸುಮಾರು ೨೦,೫೦೦ ಜನರು ಬಾಧಿತರಾಗಿದ್ದಾರೆ. ಪಿಲಿಭಿತ್‌ನಲ್ಲಿ ಶಾರದಾ ಮತ್ತು ದೇವೋಹಾ ನದಿಗಳು ಉಕ್ಕಿ ಹರಿಯುತ್ತಿದ್ದು, ಬನ್‌ಬಾಸಾ ಜಲಾಶಯದಿಂದ ೨ ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಹೊರಬಿಡಲಾಗಿದೆ. ಸ್ಥಳೀಯ ಸೇತುವೆಗಳು ಜಲಾವೃತಗೊಂಡಿದ್ದರಿಂದ ೧೮ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ಸಶಸ್ತ್ರ ಪಡೆ ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ತಗ್ಗು ಪ್ರದೇಶಗಳಲ್ಲಿರುವ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಡಳಿತ ಮಂಡಳಿ ಸೂಚಿಸಿದೆ.