
ಬೆಂಗಳೂರು,ಸೆ.೩-ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಪಶುವೈದ್ಯರ ಅಕ್ರಮ ನೇಮಕಾತಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪಗೆ ಮತ್ತೆ ನೋಟಿಸ್ ನೀಡಿದ್ದಾರೆ.
ಪ್ರಕರಣದ ಸಂಬಂಧ ಇಂದು ಇಲ್ಲವೇ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ.
ಸಿಐಡಿ ಅಧಿಕಾರಿಗಳ ಈಗಾಗಲೇ ಒಮ್ಮೆ ಶಿವಶಂಕರಪ್ಪ ವಿಚಾರಣೆ ನಡೆಸಿತ್ತು. ಕೆಲ ದಿನಗಳ ತನಿಖೆ ನಂತರ ಮತ್ತೆ ನೋಟಿಸ್ ನೀಡಲಾಗಿದ್ದು, ಮತ್ತೊಂದೆಡೆ ಹೈಕೋರ್ಟ್‌ನಲ್ಲಿ ಬಂಧನ ರಕ್ಷಣೆ ಕೋರಿ ಶಿವಶಂಕರಪ್ಪ ಸಲ್ಲಿಸಿದ್ದ ಅರ್ಜಿ ಸಂಬಂಧ ಆದೇಶ ಬರುವುದು ಇನ್ನೂ ಬಾಕಿಯಿದೆ.
ಕೆಪಿಎಸ್ಸಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಸಿಐಡಿ ಅಧಿಕಾರಿಗಳು ಸಾಹುಕಾರ್ ಶಿವಶಂಕರಪ್ಪ ಅವರನ್ನು ವಿಚಾರಣೆ ಕೈಗೊಂಡಿದ್ದರು.
ಸಿಐಡಿ ಅಧಿಕಾರಿಗಳು ಕೆಪಿಎಸ್ ಸಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಶೋಧ ನಡೆಸಿದ ಬಳಿಕ ನೀಡಿದ್ದ ನೊಟೀಸ್ ಗೆ ಸಾಹುಕಾರ್ ವಿಚಾರಣೆಗೆ ಹಾಜರಾಗಿದ್ದರು.
೪೦೦ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕೆಪಿಎಸ್ ಸಿ ತೀವ್ರ ಟೀಕೆಗೆ ಗುರಿಯಾಗಿದೆ.
ಅಭ್ಯರ್ಥಿಗಳ ಆಯ್ಕೆಗಾಗಿ ಮಧ್ಯವರ್ತಿಗಳು ಕೆಲ ಅಭ್ಯರ್ಥಿಗಳಿಗೆ ಕರೆ ಮಾಡಿ ತಲಾ ೭೦ ಲಕ್ಷದಿಂದ ೮೦ ಲಕ್ಷ ರೂಪಾಯಿಗಳವರೆಗೆ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು
ಇದಲ್ಲದೆ, ಕೆಪಿಎಸ್‌ಸಿ ಅಧಿಕಾರಿಗಳು ಹಲವು ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ ಕರೆದೊಯ್ದು, ಉತ್ತರಗಳೊಂದಿಗೆ ಪ್ರಶ್ನೆಪತ್ರಿಕೆಗಳನ್ನು ನೀಡಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಹೆಚ್ಚಿನ ಅಂಕಗಳನ್ನು ಪಡೆದ ಕೆಲ ಅಭ್ಯರ್ಥಿಗಳು ಕೆಪಿಎಸ್ ಸಿಯ ಉನ್ನತ ಹುದ್ದೆಯಲ್ಲಿರುವವರ ಸಂಬಂಧಿಕರು ಎಂದು ಶಂಕಿಸಲಾಗಿದೆ.
ಗ್ಯಾನೇಂದ್ರ ವಿರುದ್ಧ ಮತ್ತೊಂದು ಕೇಸ್ :
ಈ ನಡುವೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ಪಶುವೈದ್ಯರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತ
ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.
ಸರ್ಕಾರಿ ಹುದ್ದೆ ಮತ್ತು ಕಚೇರಿಯನ್ನು ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಹಣದ ಆಮೀಷದಿಂದ ಸರ್ಕಾರದ ಹುದ್ದೆಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ಸಂಬಂಧಿತ ಸೆಕ್ಷನ್ ಸೇರಿಸಲಾಗಿದೆ.
ಕೆಪಿಎಸ್‌ಸಿ ಕಚೇರಿಯಲ್ಲಿ ಸಿಐಡಿ ಅಧಿಕಾರಿಗಳು ಇಂದು ಮಹಜರು ನಡೆಸಿದರು.ಪ್ರಶ್ನೆಪತ್ರಿಕೆ ಲೀಕ್ ಆಗಿದ್ದ ಹಿನ್ನೆಲೆ ಗ್ಯಾನೇಂದ್ರ ಕೊಠಡಿಯಲ್ಲಿ ಮಹಜರು ನಡೆಸಲಾಗಿದೆ. ಬಳಿಕ ಗ್ಯಾನೇಂದ್ರ ಅವರನ್ನು ಸಿಐಡಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ.































