Home ಜಿಲ್ಲೆ ಕಲಬುರಗಿ ಡಾ.ಅಪ್ಪ ಅವರ ದಾಸೋಹ ತತ್ವಜ್ಞಾನ ಜೀವನ ಮೌಲ್ಯ

ಡಾ.ಅಪ್ಪ ಅವರ ದಾಸೋಹ ತತ್ವಜ್ಞಾನ ಜೀವನ ಮೌಲ್ಯ

ಕಲಬುರಗಿ,ಸೆ.2: ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ದಾಸೋಹ ತತ್ವಜ್ಞಾನವು ಕೇವಲ ಮಾತಿನ ತತ್ವವಾಗಿರದೆ, ಬದುಕಿನಲ್ಲಿ ಅನುಷ್ಠಾನಗೊಳಿಸಬೇಕಾದ ಜೀವನ ಮೌಲ್ಯವಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯೆ ಡಾ.ನಿಂಗಮ್ಮ ಪತಂಗೆ ಅವರು ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ದಾಸೋಹ ತತ್ವಜ್ಞಾನ ವಿಷಯ ಕುರಿತು ಮಾತನಾಡಿ, ಅನ್ನ ದಾಸೋಹ, ಜ್ಞಾನ ದಾಸೋಹ, ಶಿಕ್ಷಣ ದಾಸೋಹ ಮತ್ತು ಮಾನವೀಯ ಸೇವೆಯ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬಹುದು ಎಂಬ ಸಂದೇಶವನ್ನು ಪೂಜ್ಯರು ನೀಡಿದರು.
ಡಾ.ಅಪ್ಪ ಅವರ ಜೀವನ ಮತ್ತು ಚಿಂತನೆಯ ಕೇಂದ್ರಬಿಂದು ‘ದಾಸೋಹ’ವಾಗಿದೆ. ಅವರ ದೃಷ್ಟಿಯಲ್ಲಿ ದಾಸೋಹವೆಂದರೆ ಕೇವಲ ದಾನ ಮಾಡುವುದು ಅಥವಾ ಅನ್ನ ನೀಡುವುದಷ್ಟೇ ಅಲ್ಲ, ಅದು ಮಾನವ ಸೇವೆ, ಸಮಾಜ ಸೇವೆ, ಜ್ಞಾನ ಪ್ರಸಾರ, ಸಮಾನತೆ ಮತ್ತು ಪರೋಪಕಾರದ ಸಮಗ್ರ ಜೀವನ ತತ್ವವಾಗಿದೆ. ವ್ಯಕ್ತಿಯು ತನ್ನಲ್ಲಿರುವ ಸಂಪತ್ತು, ಜ್ಞಾನ, ಶಕ್ತಿ ಮತ್ತು ಸಾಮಥ್ರ್ಯವನ್ನು ಕೇವಲ ತನಗಾಗಿ ಬಳಸದೆ ಸಮಾಜದ ಒಳಿತಿಗಾಗಿ ವಿನಿಯೋಗಿಸುವುದೇ ನಿಜವಾದ ದಾಸೋಹ ಎಂದು ಅವರು ತಮ್ಮ ಬದುಕಿನ ಮೂಲಕ ಸಾರಿದರು.
“ಹಸಿದವನಿಗೆ ಅನ್ನವೇ ದೇವರು” ಎಂಬ ಮಾನವೀಯ ಭಾವನೆ ದಾಸೋಹ ತತ್ವದ ಪ್ರಮುಖ ಅಂಶವಾಗಿದೆ. ಪೂಜ್ಯ ಅಪ್ಪ ಅವರ ಚಿಂತನೆಯಂತೆ, ಹಸಿವು ನೀಗಿಸುವುದು ಅತ್ಯಂತ ಶ್ರೇಷ್ಠವಾದ ಸೇವೆಯಾಗಿದೆ.
ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ದಾಸೋಹ ತತ್ವದಲ್ಲಿ ಜ್ಞಾನ ದಾಸೋಹಕ್ಕೆ ವಿಶೇಷ ಸ್ಥಾನವಿದೆ. ಅನ್ನವು ದೇಹದ ಹಸಿವನ್ನು ನೀಗಿಸಿದರೆ, ಶಿಕ್ಷಣವು ಮನಸ್ಸಿನ ಅಜ್ಞಾನವನ್ನು ದೂರ ಮಾಡುತ್ತದೆ ಎಂಬುದು ಅವರ ಚಿಂತನೆಯ ಸಾರವಾಗಿದೆ.
ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಮಹತ್ವದ ಕೊಡುಗೆಗಳಲ್ಲಿ ಶಿಕ್ಷಣ ದಾಸೋಹವು ಪ್ರಮುಖವಾಗಿದೆ. ಶಿಕ್ಷಣವನ್ನು ವ್ಯಾಪಾರವಾಗಿ ಕಾಣದೆ, ಅದನ್ನು ಸಮಾಜ ಪರಿವರ್ತನೆಯ ಸಾಧನವಾಗಿ ಪರಿಗಣಿಸಿದರು. “ತನ್ನಗಾಗಿ ಬದುಕುವುದು ಸಾಮಾನ್ಯ ಜೀವನ, ಸಮಾಜಕ್ಕಾಗಿ ಬದುಕುವುದು ಶ್ರೇಷ್ಠ ಜೀವನ.” ಹೀಗಾಗಿ ಪೂಜ್ಯ ಅಪ್ಪ ಅವರ ದಾಸೋಹ ತತ್ವಜ್ಞಾನವು ಕಾಯಕ, ಸೇವೆ, ಸಮಾನತೆ, ಜ್ಞಾನ ಮತ್ತು ಮಾನವೀಯತೆಗಳ ಸಂಗಮವಾಗಿದ್ದು, ಆದರ್ಶ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿದೆ ಎಂದು ಅವರು ಹೇಳಿದರು.