
ಚಿಂಚೋಳಿ,ಆ.8-ತಾಲೂಕಿನ ಚಂದ್ರಂಪಳ್ಳಿ ಡ್ಯಾಂ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ನಿರ್ಮಿಸಿದ್ದ ರೈತರ ತರಬೇತಿ ಭವನ ಸಂಪೂರ್ಣ ಹಾಳಾಗಿದೆ.
ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದ ರೈತರ ತರಬೇತಿ ಭವನ ಸಂಪೂರ್ಣ ಹಾಳಾಗಿದೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕ ಉಸ್ತುವಾರಿ ಗೌತಮ್ ಬೋಮ್ನಳ್ಳಿ ಆರೋಪಿಸಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್ ಅವರು ತಾಲೂಕಿನ ರೈತರ ಅನುಕೂಲಕ್ಕಾಗಿ ಡ್ಯಾಂ ನಿರ್ಮಾಣ ಮಾಡಿದ್ದರು. ಅದೇ ರೀತಿ ತಾಲೂಕಿನ ರೈತರಿಗೆ ಅನುಕೂಲ ಆಗಲಿ ಎಂದು ಡ್ಯಾಮ್ ಪಕ್ಕದಲ್ಲಿ ಒಂದು ಗುಡ್ಡದ ಮೇಲೆ ರೈತ ತರಬೇತಿ ಭವನ ನಿರ್ಮಾಣ ಮಾಡಿದ್ದರು. ಆದರೆ ಈಗ ಅದೇ ರೈತ ತರಬೇತಿ ಭವನ ನೋಡಿದರೆ ಬೂತ್ ಬಂಗಲೆಯಂತೆ ಕಾಣುತ್ತಿದೆ. ರೈತ ತರಬೇತಿ ಭವನಕ್ಕೆ ಹೋಗಬೇಕಾದರೆ ರಸ್ತೆ ಸಂಪೂರ್ಣ ಗಿಡ ಗಂಟೆಯಿಂದ ಮುಚ್ಚಿಕೊಂಡು ಹೋಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಚಿಂಚೋಳಿ ಶಾಸಕರಾದ ಡಾ.ಅವಿನಾಶ ಜಾಧವ್ ಅವರು ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಟ್ಟ ಅಂದಿನ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಅವರ ಕನಸಿನ ಕೂಸಾದ ರೈತರ ತರಬೇತಿ ಭವನಕ್ಕೆ ವಿಶೇಷ ಅನುದಾನ ನೀಡಿ ಮತ್ತೆ ರೈತ ತರಬೇತಿ ಕೇಂದ್ರವನ್ನು ನಿರ್ಮಾಣ ಮಾಡಬೇಕೆಂದು ಬೋಮ್ನಳ್ಳಿ ಆಗ್ರಹಿಸಿದ್ದಾರೆ.































