Home ಜಿಲ್ಲೆ ಬೆಂಗಳೂರು ಚಾಮುಂಡೇಶ್ವರಿ ಕರಗ ಮಹೋತ್ಸವ ಊರ ಹಬ್ಬ: ಕೆ.ಶೇಷಾದ್ರಿ

ಚಾಮುಂಡೇಶ್ವರಿ ಕರಗ ಮಹೋತ್ಸವ ಊರ ಹಬ್ಬ: ಕೆ.ಶೇಷಾದ್ರಿ

ರಾಮನಗರ,ಆ.೧- ಆ.೪ರಂದು ಜರುಗಲಿರುವ ಚಾಮುಂಡೇಶ್ವರಿ ಕರಗ ಮಹೋತ್ಸವ ಊರ ಹಬ್ಬವಾಗಿದ್ದು,ಸಾರ್ವಜನಿಕರು ತಮ್ಮ ಕೈಲಾದ ಹಣ ಸಹಾಯ ಮಾಡಿ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ(ಶಶಿ) ತಿಳಿಸಿದರು.


ನಗರಸಭೆ ಸಭಾಂಗಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ವಿತರಿಸಿ ಬಳಿಕ ಮಾತನಾಡಿದ ಅವರು,ನಗರ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವು ನಗರದಾದ್ಯಂತ ಬಹಳ ವಿಜೃಂಭಣೆಯಿಂದ ಪ್ರತಿವರ್ಷ ನಡೆಯುತ್ತದೆ.ಅಂದು ೯ ಕಡೆಗಳಿಂದ ನಗರದ ವಿವಿಧ ಭಾಗಗಳಿಂದ ಕರಗಗಳು ಸಂಚರಿಸಲಿವೆ. ರಾಮನಗರ ಪಟ್ಟಣದಲ್ಲಿ ಈ ಹಬ್ಬದ ವಿಶೇಷವೆಂದರೆ ಲಕ್ಷಾಂತರ ಜನರು ದೇವರ ದರ್ಶನಕ್ಕಾಗಿ ದೂರದ ಊರುಗಳಿಂದ ಆಗಮಿಸುತ್ತಾರೆ ಎಂದರು


ಬಾಲಗೇರಿಯಲ್ಲಿ ಭಂಡಾರಮ್ಮ, ಬಿಸಿಲಮಾರಮ್ಮ, ಮಗ್ಗದಕೇರಿ ಮಾರಮ್ಮ ಎಂಬ ಮೂರು ಕರಗಗಳು ನಗರದ ಹೃದಯಭಾಗದಲ್ಲಿ ಶ್ರೀ ಚಾಮುಂಡೇಶ್ವರಿ ಕರಗ, ಕೊಂಕಾಣಿದೊಡ್ಡಿ, ಗಾಂಧಿನಗರ-ಶೆಟ್ಟಹಳ್ಳಿ ಬೀದಿ, ಐಜೂರಿನ ಮಾಗಡಿ ರಸ್ತೆಯಲ್ಲಿ ತಮಿಳರ ಆದಿಶಕ್ತಿ ಎಂಬ ಮೂರು ಕರಗಗಳು, ಉಲಿಗೆರಮ್ಮ ಮುತ್ತುಮಾರಮ್ಮ ಕರಗ ಸೇರಿದಂತೆ ತೋಪ್‌ಖಾನ್ ಮೊಹಲ್ಲಾದ ಭಾಗದಲ್ಲಿ ಕರಗ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸದಸ್ಯರಾದ ಆಯಿಷಾಬಾನು, ಮೊಯಿನ್ ಪಾಷ, ಬಿ.ಸಿ.ಪಾರ್ವತಮ್ಮ, ರಮೇಶ್, ಸಮದ್, ನಾಗಮ್ಮ, ಪವಿತ್ರ ಲಕ್ಮೀಕಾಂತ್, ಅಜ್ಮತ್, ಸಿಬ್ಬಂದಿ ಆರ್.ನಾಗರಾಜು, ಪುಟ್ಟಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಗರಸಭೆಯಿಂದ ಲ್ಯಾಪ್‌ಟಾಪ್ ವಿತರಣೆ
ನಗರಸಭೆ ಸಭಾಂಗಣದಲ್ಲಿ ೨೦೨೫-೨೬ರ ಸಾಲಿನ ಬಜೆಟ್‌ನ ಘೋಷಣೆಯಂತೆ ಸ್ನಾತಕೋತ್ತರ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಐವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅನ್ನು ನಗರಸಭಾಧ್ಯಕ್ಷ ಕೆ.ಶೇಷಾದ್ರಿ(ಶಶಿ) ವಿತರಿಸಿದರು.


ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಂಟು ಜನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ನೀಡುವ ನಿರ್ಧಾರವಾಗಿದ್ದು, ಇಂದು ಐದು ಮಂದಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಈ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಲಿ ಎಂಬುದು ನಗರಸಭೆಯ ಉದ್ದೇಶವಾಗಿದೆ ಎಂದರು.