Home ಮುಖಪುಟ ಸುದ್ದಿ ನನ್ನ ಹತ್ಯೆಗೆ ಯತ್ನಿಸಿದರೆ, ಇರಾನ್ ಮೇಲಿನ ದಾಳಿಗೆ ಸಾವಿರ ಕ್ಷಿಪಣಿ ಸಿದ್ಧ: ಟ್ರಂಪ್

ನನ್ನ ಹತ್ಯೆಗೆ ಯತ್ನಿಸಿದರೆ, ಇರಾನ್ ಮೇಲಿನ ದಾಳಿಗೆ ಸಾವಿರ ಕ್ಷಿಪಣಿ ಸಿದ್ಧ: ಟ್ರಂಪ್

ವಾಷಿಂಗ್ಟನ್,ಜು೧೧-“ನನ್ನನ್ನು ಹತ್ಯೆ ಮಾಡಲು ಇರಾನ್ ಸಂಚು ರೂಪಿಸಿದರೆ, ಆ ದೇಶದ ಮೇಲೆ ದಾಳಿ ಮಾಡಲು ೧,೦೦೦ ಕ್ಷಿಪಣಿಗಳನ್ನು ಸಜ್ಜಾಗಿಡಲಾಗಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದೇಶಕ್ಕೆ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ.


ತಮ್ಮದೇ ಒಡೆತನದ ಟ್ರೂತ್ ಸೋಶಿಯಲ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಇರಾನ್‌ನ ಯಾವುದೇ ರೀತಿಯ ಉದ್ಧಟತನಕ್ಕೆ ಅಮೆರಿಕದ ಮಿಲಿಟರಿ ತಕ್ಕ ಪ್ರತ್ಯುತ್ತರ ನೀಡಲು ಈಗಾಗಲೇ ಪೂರ್ವ-ಅನುಮೋದನೆ ಪಡೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

೧,೦೦೦ ಕ್ಷಿಪಣಿಗಳು ಸನ್ನದ್ಧ
“ಅಮೆರಿಕದ ಅಧ್ಯಕ್ಷರನ್ನೇ ಗುರಿಯಾಗಿಸಿಕೊಂಡು ಹತ್ಯೆಗೆ ಯತ್ನಿಸಿದರೆ ಇರಾನ್ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ. ಇದಕ್ಕಾಗಿ ೧,೦೦೦ ಕ್ಷಿಪಣಿಗಳನ್ನು ಇರಾನ್‌ನತ್ತ ಗುರಿಯಿಟ್ಟು ಸಜ್ಜಾಗಿಡಲಾಗಿದೆ. ಅಷ್ಟೇ ಅಲ್ಲದೆ, ಮೊದಲ ದಾಳಿಯ ಬೆನ್ನಲ್ಲೇ ಇನ್ನೂ ಸಾವಿರಾರು ಕ್ಷಿಪಣಿಗಳು ದಾಳಿ ನಡೆಸಲಿವೆ. ಈ ಕುರಿತು ಅಮೆರಿಕ ಸೇನೆಗೆ ಈಗಾಗಲೇ ಸ್ಪಷ್ಟ ಆದೇಶ ನೀಡಲಾಗಿದೆ” ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

“ಮುಂದಿನ ಒಂದು ವರ್ಷದ ಅವಧಿಗೆ ಇರಾನ್ ದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಅಮೆರಿಕ ಮಿಲಿಟರಿಗೆ ಮುಕ್ತ ಅವಕಾಶ ಮತ್ತು ಆದೇಶ ನೀಡಲಾಗಿದೆ.”ಇತ್ತೀಚೆಗೆ ’ನ್ಯೂಯಾರ್ಕ್ ಪೋಸ್ಟ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲೂ ಇದೇ ವಿಷಯವನ್ನು ಪ್ರಸ್ತಾಪಿಸಿದ್ದ ಟ್ರಂಪ್, “ನಾನು ಬಹಳ ದಿನಗಳಿಂದ ಇರಾನ್‌ನ ಹಿಟ್ ಲಿಸ್ಟ್‌ನಲ್ಲಿದ್ದೇನೆ. ಒಂದು ವೇಳೆ ನನಗೆ ಏನಾದರೂ ಸಂಭವಿಸಿದರೆ, ಇರಾನ್ ಹಿಂದೆಂದೂ ಕಾಣದ ಮಟ್ಟಿಗೆ ಅದರ ಮೇಲೆ ಬಾಂಬ್ ದಾಳಿ ನಡೆಸಲು ನನ್ನ ಸೇನೆಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದ್ದರು.
ಆದರೆ, ಪ್ರಸ್ತುತ ತಮ್ಮ ಹತ್ಯೆಗೆ ಇರಾನ್ ತಕ್ಷಣದ ಯಾವುದೇ ಹೊಸ ಸಂಚು ರೂಪಿಸಿರುವ ಬಗ್ಗೆ ಇಂಟೆಲಿಜೆನ್ಸ್ ವರದಿಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ಈ ಬಗ್ಗೆ ಹೊಸ ಮಾಹಿತಿ ನೀಡಿದೆ ಎಂಬ ವರದಿಗಳನ್ನೂ ಅವರು ತಳ್ಳಿಹಾಕಿದ್ದಾರೆ.

೨೦೨೦ ರಲ್ಲಿ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್‌ನ ಪ್ರಭಾವಿ ಮಿಲಿಟರಿ ಕಮಾಂಡರ್ ಖಾಸೆಮ್ ಸೊಲೈಮಾನಿ ಹತರಾಗಿದ್ದರು. ಅಂದಿನಿಂದ ಇರಾನ್ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದೆ ಎನ್ನಲಾಗಿದೆ.

ಮತ್ತೊಂದೆಡೆ, ಇರಾನ್ ಮತ್ತೆ ಮಾತುಕತೆಗೆ ಬರಲು ಇಚ್ಛಿಸಿದೆ ಎಂದು ತಿಳಿಸಿರುವ ಟ್ರಂಪ್, “ನಾವು ಮಾತುಕತೆಗೆ ಒಪ್ಪಿದ್ದೇವೆ, ಆದರೆ ಕದನ ವಿರಾಮದ ಅವಧಿ ಮುಗಿದಿದೆ ಎಂಬುದನ್ನು ಇರಾನ್‌ಗೆ ಸ್ಪಷ್ಟವಾಗಿ ತಿಳಿಸಿದ್ದೇವೆ” ಎಂದು ಹೇಳಿದ್ದಾರೆ.