Home ಜಿಲ್ಲೆ ಜಿಲ್ಲಾ ಮಟ್ಟದ ತೃತೀಯ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಮಲ್ಲಮ್ಮ ಪಾಟೀಲ ಆಯ್ಕೆ

ಜಿಲ್ಲಾ ಮಟ್ಟದ ತೃತೀಯ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಮಲ್ಲಮ್ಮ ಪಾಟೀಲ ಆಯ್ಕೆ

ಬೀದರ:ಜು.೮:ಕಮಲನಗರದಲ್ಲಿ ಹುಟ್ಟಿ ಎಮ್ ಎ ಅರ್ಥಶಾಸ್ತ್ರ ದಲ್ಲಿ ವ್ಯಾಸಂಗ ಮಾಡಿ, ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ೩೨ ವರ್ಷಗಳ ಕಾಲ ಸೇವೆ ಸಲ್ಲಿಸುವುದರ ಜೊತೆಗೆ ಸಾಹಿತಿ, ಕವಿಗಳಾಗಿ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನೇ ತಾನೆ ತೊಡಗಿಸಿಕೊಂಡ ಅಪರೂಪದ ಮಹಿಳೆ ಇವರಾಗಿದ್ದಾರೆ.

ದಿನಾಂಕ ೩.೦೭.೨೦೨೬ ರ ಭಾಲ್ಕಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಪ್ರಸ್ತಾಪದಂತೆ ಹಾಗೂ ಜಿಲ್ಲಾ ಕಾರ್ಯಕಾರಿ ಮಂಡಳಿಯ ತೀರ್ಮಾನದಂತೆ ಭಾಲ್ಕಿ ಮರೂರ ಗ್ರಾಮದ ಮಲ್ಲಮ್ಮ ಆರ್ ಪಾಟೀಲ ಅವರು ತೃತೀಯ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಮಲ್ಲಮ್ಮ ಆರ್ ಪಾಟೀಲರು ಶಿವಯೋಗಿ ಚನ್ನಬಸವ, ಶ್ರದ್ಧಾಂಜಲಿ, ವಚನಗಳು ಗ್ರಂಥ ರಚನೆಕಾರರಾಗಿದ್ದಾರೆ. ಇದಲ್ಲದೆ ಅನೇಕ ಸಾಹಿತ್ಯಿಕ ಕಮ್ಮಟ, ಗೋಷ್ಠಿ, ಕವಿ ಗೋಷ್ಠಿ ಸಂಕಿರಣಗಳಲ್ಲಿ ಉಪನ್ಯಾಸ ಮಂಡಿಸಿದ್ದಾರೆ. ಅನೇಕ ಪತ್ರಿಕೆಯಲ್ಲಿ ಇವರ ಲೇಖನ, ಕವನ ಸಹ ಪ್ರಕಟಗೊಂಡಿವೆ.

ಭಾಲ್ಕಿ ಹಿರೇಮಠದ ಪ್ರತಿಯೊಂದು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಘಟಕರಾಗಿ ಸಹಭಾಗಿತ್ವ, ಶರಣ ಸಾಹಿತ್ಯ ಪರಿಷತ್ತು ತಾ ಅಧ್ಯಕ್ಷ ರಾಗಿ ಮನೆಗೊಂದು ವಚನ ಪ್ರವಚನ, ಆನಾಥ ಮಕ್ಕಳಿಗಾಗಿ ಪ್ರತಿ ವರ್ಷ ಧನ ಸಹಾಯ ಮಾಡುತ್ತ ಸಾಮಾಜಿಕ ಕಾರ್ಯದಲ್ಲಿ ಸಹಭಾಗಿಗಳಾಗಿದ್ದಾರೆ.

ಈಗಾಗಲೇ ಸಮಾಜ ಸೇವಕಿ, ಯೋಗಾಂಗ ತ್ರಿವಿಧಿ , ಡಾ ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿ, ಹಳಕಟ್ಟಿ ವಚನೋತ್ಸವ ಪ್ರಶಸ್ತಿ, ಗಡಿನಾಡು ಉತ್ಸವ ಪ್ರಶಸ್ತಿ,ಸಾಹಿತ್ಯ ಸರಸ್ವತಿ, ಶಿಕ್ಷಕ ಸಾಹಿತ್ಯ ಪ್ರಶಸ್ತಿ, ಉತ್ತಮ ಶಿಕ್ಷಕಿ ಪ್ರಶಸ್ತಿ ಜಿಲ್ಲಾಡಳಿದಿಂದ ಅದು ಅಲ್ಲದೆ ಕರ್ನಾಟಕ ಸರಕಾರದಿಂದ ೨೦೨೨ನೇ ಸಾಲಿನಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ತಮ್ಮದಾಗಿಸಿ ಕೊಂಡಿದ್ದಾರೆ. ಇವರ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ವೈಚಾರಿಕ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಅವರನ್ನು ತೃತೀಯ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿದೆ.

ಜುಲೈ ತಿಂಗಳ ಕೊನೆಯ ವಾರದಲ್ಲಿ ಭಾಲ್ಕಿ ಪಟ್ಟಣದಲ್ಲಿ ಸಮ್ಮೇಳನ ಮಾಡಲಾಗುತ್ತದೆ. ಸದ್ಯದಲ್ಲೇ ಭಾಲ್ಕಿಯ ವಿವಿಧ ಸಂಘ ಸಂಸ್ಥೆಗಳ, ಹಿರಿಯರ, ಕನ್ನಡ ಹೋರಾಟಗಾರರ ಸಭೆಯನ್ನು ಆಯೋಜಿಸಿ ಸಮ್ಮೇಳನದ ಯೋಜನೆ ರೂಪಿಸ ಲಾಗುತ್ತದೆ ಎಂದು ಸುರೇಶ ಚೆನ್ನಶೆಟ್ಟಿ ಜಿಲ್ಲಾಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು, ಬೀದರ ತಿಳಿಸಿದ್ದಾರೆ.