Home Uncategorized ಪೆಟ್ರೋಲ್‌ಗೆ ಶೇ.೨೦ ಎಥನಾಲ್ ಮಿಶ್ರಣ ಮುಂದಿನ ವರ್ಷದ ನಿಖರ ಫಲಿತಾಂಶ ಲಭ್ಯ

ಪೆಟ್ರೋಲ್‌ಗೆ ಶೇ.೨೦ ಎಥನಾಲ್ ಮಿಶ್ರಣ ಮುಂದಿನ ವರ್ಷದ ನಿಖರ ಫಲಿತಾಂಶ ಲಭ್ಯ

ಸುಪ್ರೀಂಗೆ ಕೇಂದ್ರದ ಮಾಹಿತಿ

ನವದೆಹಲಿ.ಜೂ೩೦: ದೇಶದಲ್ಲಿ ಜಾರಿಯಲ್ಲಿರುವ ಪೆಟ್ರೋಲ್‌ನಲ್ಲಿ ಶೇಕಡಾ ೨೦ ರಷ್ಟು ಎಥನಾಲ್ ಮಿಶ್ರಣ ಮಾಡುವ ಯೋಜನೆ ಚಾಲ್ತಿಯಲ್ಲಿರುವ ಪ್ರಯೋಗವಾಗಿದೆ. ಈ ನೀತಿಯ ಒಟ್ಟಾರೆ ಪರಿಣಾಮಗಳು ಮುಂದಿನ ವರ್ಷದ ವೇಳೆಗೆ ಹೆಚ್ಚು ಸ್ಪಷ್ಟವಾಗಲಿವೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.


ಇಂಧನ ಭದ್ರತೆ, ರೈತರ ಹಿತರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಅತ್ಯಂತ ಪ್ರಯೋಜನಕಾರಿ ಎಂದು ಸರ್ಕಾರ ನಿರಂತರವಾಗಿ ಸಮರ್ಥಿಸಿಕೊಳ್ಳುತ್ತಿರುವ ನಡುವೆಯೇ ನ್ಯಾಯಾಲಯದಿಂದ ಈ ಮಹತ್ವದ ಹೇಳಿಕೆ ಹೊರಬಿದ್ದಿದೆ.

೨೦೨೫-೨೬ರ ಪೂರೈಕೆ ವರ್ಷಕ್ಕೆ ಎಥನಾಲ್ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಃPಅಐ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, “ಶೇ. ೨೦ರಷ್ಟು ಎಥನಾಲ್ ಮಿಶ್ರಣ ಮಾಡುವುದು ಸರ್ಕಾರದ ಒಂದು ಪ್ರಾಯೋಗಿಕ ಹೆಜ್ಜೆಯಾಗಿದೆ. ಮುಂದಿನ ವರ್ಷದ ವೇಳೆಗೆ ನಮಗೆ ಇದರ ಸಂಪೂರ್ಣ ಫಲಿತಾಂಶಗಳು ಸಿಗಲಿವೆ,” ಎಂದು ಕೋರ್ಟ್‌ಗೆ ವಿವರಿಸಿದರು.


ಹೈಕೋರ್ಟ್‌ನ ಪ್ರಸ್ತುತ ಆದೇಶದಿಂದಾಗಿ, ಶೇ. ೨೦ರಷ್ಟು ಎಥನಾಲ್ ಮಿಶ್ರಣವನ್ನು ಸಾಧಿಸುವ ಸರ್ಕಾರದ ಬೃಹತ್ ರಾಷ್ಟ್ರೀಯ ನೀತಿಯ ಉದ್ದೇಶಕ್ಕೆ ಧಕ್ಕೆಯಾಗಬಹುದು ಎಂದು ಬಿಪಿಸಿಎಲ್ ತನ್ನ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.


ವಿಚಾರಣೆ ವೇಳೆ, ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶದ ವಿರುದ್ಧ ಬಿಪಿಸಿಎಲ್ ಸಂಸ್ಥೆಯು ಅಲ್ಲಿನ ವಿಭಾಗೀಯ ಪೀಠಕ್ಕೆ (ಡಿವಿಷನ್ ಬೆಂಚ್) ಏಕೆ ಮೇಲ್ಮನವಿ ಸಲ್ಲಿಸಲಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್, “ಎಥನಾಲ್ ಪೂರೈಕೆ ಒಪ್ಪಂದಗಳನ್ನು ಈಗಾಗಲೇ ೨೦೨೫ರ ಅಕ್ಟೋಬರ್‌ನಲ್ಲಿ ಅಂತಿಮಗೊಳಿಸಲಾಗಿದೆ. ಇದೇ ರೀತಿಯ ಹಲವು ಅರ್ಜಿಗಳು ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ. ಹೀಗಾಗಿ ನಾವು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಹೋಗಿ, ನಂತರ ಮತ್ತೆ ಬೇರೆ ಕೋರ್ಟ್‌ಗಳಿಗೆ ಅಲೆಯುವುದರಿಂದ ತೀವ್ರ ವಿಳಂಬವಾಗುತ್ತದೆ. ಇದು ರಾಷ್ಟ್ರೀಯ ನೀತಿಯ ಮೇಲೆ ನೇರ ಪರಿಣಾಮ ಬೀರಲಿದೆ,” ಎಂದು ಸ್ಪಷ್ಟಪಡಿಸಿದರು.

ಬರುವ ಅಕ್ಟೋಬರ್ ತಿಂಗಳಿನಲ್ಲಿ ಎಥನಾಲ್ ಪೂರೈಕೆ ಒಪ್ಪಂದಗಳು ನವೀಕರಣಕ್ಕೆ ಬರಲಿದ್ದು, ಅದಕ್ಕೂ ಮುನ್ನವೇ ಈ ಗೊಂದಲಗಳಿಗೆ ತೆರೆ ಬೀಳಬೇಕಿದೆ. ಹೀಗಾಗಿ ವಿವಿಧ ಹೈಕೋರ್ಟ್‌ಗಳಲ್ಲಿರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ಅನುಮತಿ ನೀಡಬೇಕು ಎಂದು ವೆಂಕಟರಮಣಿ ಅವರು ಕೋರಿದರು.

ಸದ್ಯ ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದು, ನ್ಯಾಯಾಲಯದ ರಜಾಕಾಲದ ನಂತರ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.