
ಬೆಂಗಳೂರು, ಜೂ. ೩೦- ರಾಜ್ಯದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಜುಲೈ ೨೯ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ರಾಜ್ಯದಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು (ಃಐಔ) ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲನೆ ನಡೆಸಲಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ೫,೫೪,೩೨,೩೧೪ ಮತದಾರರಿದ್ದು, ಇವರಲ್ಲಿ ೫,೦೭,೭೯,೮೧೦ ಮತದಾರರು ಈಗಾಗಲೇ ಮ್ಯಾಪಿಂಗ್‌ಗೆ ಒಳಪಟ್ಟಿದ್ದಾರೆ. ಇದು ಒಟ್ಟು ಮತದಾರರ ೯೧.೬೧ ಶೇಕಡಾ ಆಗಿದ್ದು, ೪೬,೫೨,೫೦೪ ಮತದಾರರು ಇನ್ನೂ ಮ್ಯಾಪಿಂಗ್‌ನಿಂದ ಹೊರಗಿದ್ದಾರೆ.
ಈ ಕಾರ್ಯಕ್ಕಾಗಿ ರಾಜ್ಯದಾದ್ಯಂತ ೫೯,೦೫೦ ಬಿಎಲ್‌ಒಗಳು, ೩೧ ಜಿಲ್ಲಾ ಚುನಾವಣಾಧಿಕಾರಿಗಳು, ೪ ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ೨೨೪ ಮತದಾರರ ನೋಂದಣಾಧಿಕಾರಿಗಳು, ೩೩೬ ಸಹಾಯಕ ಮತದಾರರ ನೋಂದಣಾಧಿಕಾರಿಗಳು, ೭,೫೫೬ ಬಿಎಲ್‌ಒ ಮೇಲ್ವಿಚಾರಕರು ಹಾಗೂ ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ೧,೧೫,೧೧೨ ಬೂತ್ ಮಟ್ಟದ ಏಜೆಂಟ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಬಿಎಲ್‌ಒಗಳಿಗೆ ಈಗಾಗಲೇ ಸಮಗ್ರ ತರಬೇತಿ ನೀಡಲಾಗಿದೆ.
ಎಸ್‌ಐಆರ್ ಪ್ರಕ್ರಿಯೆ ಹೇಗೆ ನಡೆಯಲಿದೆ?
ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿ ಎರಡು ನಿಗದಿತ ಅರ್ಜಿ ನಮೂನೆಗಳನ್ನು ನೀಡಲಿದ್ದಾರೆ. ಮತದಾರರು ಎರಡೂ ಪ್ರತಿಗಳನ್ನು ಭರ್ತಿ ಮಾಡಿ, ಒಂದು ಪ್ರತಿಯನ್ನು ತಮ್ಮ ದಾಖಲೆಯಾಗಿ ಇಟ್ಟುಕೊಂಡು ಮತ್ತೊಂದನ್ನು ಬಿಎಲ್‌ಒಗಳಿಗೆ ಹಿಂತಿರುಗಿಸಬೇಕು. ಇದೇ ವೇಳೆ ಹೊಸ ಮತದಾರರ ಹೆಸರು ಸೇರ್ಪಡೆ, ಹೆಸರು ಅಥವಾ ವಿಳಾಸ ತಿದ್ದುಪಡಿ ಸೇರಿದಂತೆ ಅಗತ್ಯ ಬದಲಾವಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬಿಎಲ್‌ಒಗಳೊಂದಿಗೆ ರಾಜಕೀಯ ಪಕ್ಷಗಳ ನೋಂದಾಯಿತ ಬೂತ್ ಮಟ್ಟದ ಏಜೆಂಟ್‌ಗಳೂ ಭೇಟಿ ನೀಡಲಿದ್ದಾರೆ. ಅರ್ಜಿ ವಿತರಿಸಿದ ಬಳಿಕ ಮನೆಗೆ ಬಿಳಿ ಮತ್ತು ನೇರಳೆ ಬಣ್ಣದ ಸ್ಟಿಕರ್ ಅಂಟಿಸಲಾಗುತ್ತದೆ. ಮನೆಗೆ ಯಾರೂ ಇಲ್ಲದಿದ್ದರೆ ಬಿಳಿ ಮತ್ತು ಕೆಂಪು ಬಣ್ಣದ ಸ್ಟಿಕರ್ ಅಂಟಿಸಿ ಮತ್ತೆ ಭೇಟಿ ನೀಡಲಾಗುತ್ತದೆ. ಬಳಿಕ ಬಿಎಲ್‌ಒಗಳು ಸಂಗ್ರಹಿಸಿದ ಅರ್ಜಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿ ದಾಖಲಿಸಲಿದ್ದಾರೆ.
ಪ್ರಮುಖ ವೇಳಾಪಟ್ಟಿ
ಜೂನ್ ೩೦ ಜುಲೈ ೨೯: ಎಸ್‌ಐಆರ್ ಮನೆಮನೆ ಸಮೀಕ್ಷೆ
ಆಗಸ್ಟ್ ೫: ಕರಡು ಮತದಾರರ ಪಟ್ಟಿ ಪ್ರಕಟಣೆ
ಆಗಸ್ಟ್ ೫ ಸೆಪ್ಟೆಂಬರ್ ೪: ಆಕ್ಷೇಪಣೆ ಹಾಗೂ ಹಕ್ಕು ಮಂಡನೆ ಸಲ್ಲಿಕೆ
ಆಗಸ್ಟ್ ೫ ಅಕ್ಟೋಬರ್ ೩: ನೋಟಿಸ್ ಹಂತ ಮತ್ತು ಆಕ್ಷೇಪಣೆಗಳ ವಿಲೇವಾರಿ
ಅಕ್ಟೋಬರ್ ೭: ಅಂತಿಮ ಮತದಾರರ ಪಟ್ಟಿ ಪ್ರಕಟಣೆ
ಮತದಾರರು ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಸಹಕರಿಸುವ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.



























