
ಅಯೋಧ್ಯೆ, ಜೂ. ೩೦- ಜಗತ್ಪ್ರಸಿದ್ಧ ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಣ ಕಳುವು ಪ್ರಕರಣದ ತನಿಖೆ ತೀವ್ರಗೊಂಡಿದ್ದು, ವಿಶೇಷ ತನಿಖಾ ತಂಡದ ವರದಿ ಬೆನ್ನಲ್ಲೇ ಆಡಳಿತಾತ್ಮಕ ಮತ್ತು ಕಾನೂನು ಕ್ರಮಗಳು ವೇಗ ಪಡೆದುಕೊಂಡಿವೆ.
ಕಳೆದ ೧೭ ವರ್ಷಗಳಿಂದ ಅಯೋಧ್ಯೆಯಲ್ಲೇ ಬೀಡುಬಿಟ್ಟಿದ್ದ ರೇಡಿಯೋ ನಿರ್ವಹಣಾ ಅಧಿಕಾರಿ ಅರ್ಜುನ್ ದೇವ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಗೋರಖ್ಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಜುಲೈ ೧೪ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
೨೦೦೯ರಿಂದ ಅಯೋಧ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅರ್ಜುನ್ ದೇವ್ ಅವರ ವರ್ಗಾವಣೆಗೆ ಈ ಹಿಂದೆ ಹಲವು ಬಾರಿ ಆದೇಶ ಹೊರಡಿಸಲಾಗಿದ್ದರೂ, ಪ್ರತಿ ಬಾರಿಯೂ ಪ್ರಭಾವ ಬಳಸಿ ಅದನ್ನು ರದ್ದುಗೊಳಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಲಕ್ನೋಗೆ ಮಾಡಲಾಗಿದ್ದ ವರ್ಗಾವಣೆಯೂ ರದ್ದಾಗಿತ್ತು. ಆದರೆ, ಎಸ್ಐಟಿ ವರದಿಯಲ್ಲಿ ಇವರ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದ ಹಿನ್ನೆಲೆಯಲ್ಲಿ ಈ ಬಾರಿ ಗೋರಖ್ಪುರಕ್ಕೆ ಎತ್ತಂಗಡಿ ಮಾಡಲಾಗಿದೆ.
ದೇಣಿಗೆ ಎಣಿಕೆ ಕೊಠಡಿಯ ಸಿಸಿಟಿವಿ ಕಣ್ಗಾವಲು ಮತ್ತು ಮಂದಿರದ ಸಂಕೀರ್ಣದಲ್ಲಿರುವ ಸುಮಾರು ೧,೬೦೦ ಸಿಸಿಟಿವಿ ಕ್ಯಾಮೆರಾಗಳ ಉಸ್ತುವಾರಿ ಇವರ ಹೆಗಲಿಗೇ ಇತ್ತು. ಅಧಿಕೃತ ಕರ್ತವ್ಯದ ಹೊರತಾಗಿ, ವಿವಿಐಪಿ ದರ್ಶನ ವ್ಯವಸ್ಥೆ ಹಾಗೂ ಮಂದಿರದ ಆಡಳಿತ ಮಂಡಳಿಯ ಇತರ ಪ್ರಮುಖ ನಿರ್ಧಾರಗಳಲ್ಲೂ ಇವರು ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಎಸ್ಐಟಿ ವರದಿ ಉಲ್ಲೇಖಿಸಿದೆ.
ಪ್ರಕರಣದ ತನಿಖೆ ಕೇವಲ ಬಂಧಿತ ಆರೋಪಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಂದಿರದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಸುಮಾರು ೭೦ ರಿಂದ ೮೦ ಜನರು ಈಗ ತನಿಖಾ ಸಂಸ್ಥೆಯ ರಾಡಾರ್ನಲ್ಲಿದ್ದಾರೆ. ಅನುಮಾನಾಸ್ಪದ ನಡೆ ಹೊಂದಿರುವ ಇವರೆಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮಂದಿರದ ವ್ಯವಹಾರ ಹೊಂದಿರುವ ಎಸ್ಬಿಐ ಬ್ಯಾಂಕ್ ಆಫ್ ಬರೋಡಾ ಮತ್ತು ಕೆನರಾ ಬ್ಯಾಂಕ್ ಸೇರಿದಂತೆ ಒಟ್ಟು ಆರು ಪ್ರಮುಖ ಬ್ಯಾಂಕುಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ನಗದು ಎಣಿಕೆ ಪ್ರಕ್ರಿಯೆಯ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದ ಎಸ್ಬಿಐ ನೌಕರರಾದ ರತ್ನೇಷ್ ಚತುರ್ವೇದಿ ಮತ್ತು ಗಗನ್ದೀಪ್ ಅವರ ಪಾತ್ರದ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಜೊತೆಗೆ, ಮಂದಿರದ ಟ್ರಸ್ಟ್ ಉದ್ಯೋಗಿಗಳ ಸಂಪೂರ್ಣ ಬ್ಯಾಂಕ್ ಖಾತೆ ವಿವರಗಳನ್ನು ನೀಡುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ.
ಬಂಧಿತ ಆರೋಪಿಗಳು ಕೃತ್ಯದ ಬಳಿಕ ತಮ್ಮ ಮೊಬೈಲ್ನಿಂದ ಪ್ರಮುಖ ವಾಟ್ಸಾಪ್ ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದುಹೋದ ಡಿಜಿಟಲ್ ಸಾಕ್ಷ್ಯಗಳನ್ನು ಮರುಪಡೆಯಲು ಎಲ್ಲಾ ೮ ಮೊಬೈಲ್ ಫೋನ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಭ್ರಷ್ಟಾಚಾರ ನಿರೋಧಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಇವರನ್ನು ಜುಲೈ ೧೪ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಗಳ ಮನೆಗಳ ಮೇಲೆ ನಡೆಸಿದ ದಾಳಿಯ ಸಂದರ್ಭದಲ್ಲಿ ಭೂ ನೋಂದಣಿ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಬ್ಯಾಂಕ್ ಪಾಸ್ಬುಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಭಾರಿ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಪತ್ತೆಯಾಗಿದ್ದು, ಇವುಗಳನ್ನು ಮಂದಿರದ ದೇಣಿಗೆ ಹಣದಿಂದಲೇ ಖರೀದಿಸಲಾಗಿದೆಯೇ ಎಂಬ ನಿಟ್ಟಿನಲ್ಲಿ ಪರಿಶೀಲನೆ ನಡೆಯುತ್ತಿದೆ.



























