
ಉಕ್ಕು ಕಾರ್ಖಾನೆ ದುರಂತ
ವಿಶಾಖಪಟ್ಟಣ, ಜೂ. ೯- ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಸ್ಥಾವರದಲ್ಲಿ ನಿನ್ನೆ ನಡೆದ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ ೨೫ ಲಕ್ಷ ಹಾಗೂ ಗಾಯಾಳುಗಳಿಗೆ ೧೦ ಲಕ್ಷ ಪರಿಹಾರ ನೀಡುವುದಾಗಿ ಕೇಂದ್ರ ಕೈಗಾರಿಕಾ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ರಾಷ್ಟ್ರೀಯ ಉಕ್ಕು ಸ್ಥಾವರದಲ್ಲಿ ಕರಗಿದ ಲೋಹ ಭಾರೀ ಪ್ರಮಾಣದಲ್ಲಿ ಹರಿದು ೮ ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನಿನ್ನೆ ರಾತ್ರಿ ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಆಗಮಿಸಿದ ಕೇಂದ್ರ ಸಚಿವ ಕುಮಾರಸ್ವಾಮಿಯವರು ಉಕ್ಕು ಸ್ಥಾವರಕ್ಕೆ ಭೇಟಿ ನೀಡಿ ಅವಘಡ ಸಂಭವಿಸಿದ ಸ್ಥಳವನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಘಟನೆ ಬಗ್ಗೆ ಮಾಹಿತಿ ತಿಳಿದುಕೊಂಡು ದುರಂತದ ಕಾರಣವನ್ನು ಪತ್ತೆಹಚ್ಚಲು ಸ್ವತಂತ್ರ ತನಿಖೆಗೆ ಆದೇಶಿಸಿದರು.
ಈ ದುರ್ಘಟನೆಯಿಂದ ನನಗೆ ತೀವ್ರ ಆಘಾತ ಉಂಟಾಗಿದೆ. ನೊಂದ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಅವರು ಹೇಳಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ೨೫ ಲಕ್ಷ ಹಾಗೂ ಗಾಯಾಳುಗಳಿಗೆ ೧೦ ಲಕ್ಷ ಪರಿಹಾರ ನೀಡಲಾಗುವುದಲ್ಲದೆ, ಮೃತ ಕಾರ್ಮಿಕರ ಕುಟುಂಬದ ಅರ್ಹ ಸದಸ್ಯರಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡಲಾಗುವುದು. ಹಾಗೆಯೇ ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಾರ್ಖಾನೆ ಭರಿಸುತ್ತದೆ ಹಾಗೂ ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಾಮಮೋಹನ ನಾಯ್ಡು, ಸಂಸದ ಭರತ್ ಕೇಂದ್ರ ಸಚಿವ ಕುಮಾರಸ್ವಾಮಿಯವರ ಜತೆ ಇದ್ದರು.






























