
ಹುಳಿಯಾರು, ಜೂ. ೬- ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಿಮ್ಮನಹಳ್ಳಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾಣೇಹಳ್ಳಿ ಸಮೀಪವಿರುವ ’ಗಿಣಿ ವಜ್ರದ ಬಳಿ ಅಣೆಕಟ್ಟು (ಡ್ಯಾಂ) ನಿರ್ಮಿಸುವ ಮೂಲಕ ನೀರನ್ನು ಸಂಗ್ರಹಿಸಿ, ತೀರ್ಥಪುರ, ರಾಮನಹಳ್ಳಿ ಹಾಗೂ ತಿಮ್ಮನಹಳ್ಳಿ ಭಾಗದ ನೀರಿನ ಅಭಾವವನ್ನು ಶಾಶ್ವತವಾಗಿ ನೀಗಿಸುವುದು ನನ್ನ ಆಶಯವಾಗಿದೆ ಎಂದು ಹೇಳಿದರು.
ಬೋರನಕಣಿವೆಯಿಂದ ಪೈಪ್ಲೈನ್ ಮೂಲಕ ಮಲ್ಟಿ ವಿಲೇಜ್ ಸ್ಕೀಮ್ ಅಡಿಯಲ್ಲಿ ತಿಮ್ಮನಹಳ್ಳಿಗೆ ನೀರು ಪೂರೈಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ತಿಮ್ಮನಹಳ್ಳಿಯಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಸಿದ್ದನಕಟ್ಟೆಯ ಕೆರೆಯ ಏರಿ ಶಿಥಿಲಗೊಂಡಿದ್ದು, ಅದನ್ನು ಪರಿಶೀಲಿಸಿ ಶೀಘ್ರವೇ ಅಭಿವೃದ್ಧಿಪಡಿಸಲಾಗುವುದು. ಪ್ರದೇಶದ ಸಮಗ್ರ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ೧.೮೦ ಕೋಟಿ ರೂ. ವೆಚ್ಚದ ವಿವಿಧ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮೈಲಪನಬೆಟ್ಟದಿಂದ ಬೋವಿ ಕಾಲೋನಿವರೆಗೆ (೩೦ ಲಕ್ಷ), ಬೋವಿ ಕಾಲೋನಿ ಪರಿಮಿತಿಯಲ್ಲಿ (೨೦ ಲಕ್ಷ), ಬೆಂಕಿಪುರ ಗ್ರಾಮದಲ್ಲಿ (೧೦ ಲಕ್ಷ) ಹಾಗೂ ತಿಮ್ಮನಹಳ್ಳಿ ಕಾಲೋನಿಯಲ್ಲಿ (೯೯ ಲಕ್ಷ) ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ಹನುಮಂತಯ್ಯ ಮಾತನಾಡಿ, ಶಾಸಕರು ನಮ್ಮ ಭಾಗದಲ್ಲಿ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.
ಮುಖಂಡ ಹರ್ಷ ತಿಮ್ಮನಹಳ್ಳಿ ಮಾತನಾಡಿ, ಶಾಸಕರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಶಿಕ್ಷಣದ ಜತೆಗೆ ರೈತರ ಜೀವನಾಡಿಯಾದ ನೀರಿನ ವ್ಯವಸ್ಥೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಚಿತ್ತಯ್ಯ, ಕೆ.ಆರ್.ಐ.ಡಿ.ಎಲ್ ಇಂಜಿನಿಯರ್ ಶಿವಕುಮಾರ್, ಮುಖಂಡರಾದ ಮಂಜಣ್ಣ, ಸಿ.ಎಚ್. ನಾಗರಾಜು, ಪಾಂಡುರಂಗಯ್ಯ, ಪಿಡಿಒ ಶ್ರೀನಿವಾಸಬಾಬು ಮತ್ತಿತರರು ಭಾಗವಹಿಸಿದ್ದರು.


































