
ಬೆಂಗಳೂರು, ಜೂ. ೫- ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ರವರು ಇಂದು ಬೆಂಗಳೂರಿನ ನಗರ ದೇವತೆ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು.
ಇಂದು ಬೆಳಿಗ್ಗೆ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ತೆರಳಿದ ಡಿ.ಕೆ. ಶಿವಕುಮಾರ್ ರವರು ದೇವಸ್ಥಾನದ ಆವರಣದಲ್ಲಿರುವ ಬಿಸಲ್ ಮಾರಮ್ಮ ದೇವಸ್ಥಾನಕ್ಕೆ ಮೊಸರು ಅಭಿಷೇಕ ಮಾಡಿದರು.
ನಂತರ ಅಣ್ಣಮ್ಮ ದೇವಿಗೆ ಮಂಗಳಾರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಅಣ್ಣಮ್ಮ ದೇವಿಯ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಮ್ಮ ದೇವಿ ನಮ್ಮ ನಾಡಿನ ನಗರದ ಗ್ರಾಮ ದೇವತೆ. ತಾಯಿ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು.
ರಾಜ್ಯದ ಅಭಿವೃದ್ಧಿಗೆ ತಾಯಿ ಅಣ್ಣಮ್ಮ ಆಶೀರ್ವಾದ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.
ಪೂರ್ಣಕುಂಭ ಸ್ವಾಗತ
ನಗರ ದೇವತೆ ಅಣ್ಣಮ್ಮನ ಗುಡಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಅಣ್ಣಮ್ಮ ದೇವಸ್ಥಾನದ ಆಡಳಿತ ಮಂಡಳಿ ಪೂರ್ಣಕುಂಭ, ಮಂಗಳವಾದ್ಯಗಳ ಮೂಲಕ ಸ್ವಾಗತ ನೀಡಿತು.




























