Home ಮುಖಪುಟ ಸುದ್ದಿ ಖಾತೆ ಹಂಚಿಕೆ:ಮುನಿಯಪ್ಪ ಸಹ ಅಸಮಾಧಾನ

ಖಾತೆ ಹಂಚಿಕೆ:ಮುನಿಯಪ್ಪ ಸಹ ಅಸಮಾಧಾನ

ಬೆಂಗಳೂರು, ಜೂ. ೫- ಖಾತೆ ಹಂಚಿಕೆ ಸಂಬಂಧ ಅಸಮಾಧಾನ ವ್ಯಕ್ತಪಡಿಸಿ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಹಿರಿಯ ಸಚಿವ ಕೆ.ಹೆಚ್. ಮುನಿಯಪ್ಪ ಸಹ ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.


ದೇವನಹಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆಯಲ್ಲಿ ಹಿರಿತನ ಕಾಪಾಡಿಲ್ಲ. ಹಿರಿಯರಿಗೆ ಸರಿಯಾದ ಖಾತೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ ಅವರು ತಾಯಿ ಸ್ಥಾನದಲ್ಲಿದ್ದಾರೆ. ಅವರು ಎಲ್ಲ ಮಕ್ಕಳನ್ನು ಒಂದೇ ರೀತಿ ಕಾಣಬೇಕು. ಖಾತೆ ಹಂಚಿಕೆಯಲ್ಲಿ ಹಿರಿತನ ನೋಡಬೇಕಿತ್ತು. ನನಗೆ ಮತ್ತೆ ಆಹಾರ ಖಾತೆಯನ್ನೇ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಸಹ ರಾಮಲಿಂಗಾರೆಡ್ಡಿಯವರಂತೆ ೮ ಬಾರಿ ಗೆದ್ದಿದ್ದೇನೆ. ಶಾಸನ ಸಭೆಯಲ್ಲಿ ಆರ್.ಬಿ. ದೇಶಪಾಂಡೆ ಬಿಟ್ಟರೆ ರಾಮಲಿಂಗಾರೆಡ್ಡಿ ಅವರೇ ಹಿರಿಯರು ಹಿರಿತನಕ್ಕೆ ಮನ್ನಣೆ ಸಿಗಬೇಕು. ಹಿರಿಯರಿಗೆ ಒಳ್ಳೆ ಖಾತೆಗಳನ್ನು ನೀಡಬೇಕು ಎಂದರು.


ಖಾತೆ ಹಂಚಿಕೆಯಲ್ಲಿ ಆಗಿರುವ ಅಸಮಾತೋಲನದ ಬಗ್ಗೆ ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಪಕ್ಷದ ವರಿಷ್ಠರಾದ ರಾಹುಲ್‌ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಗಮನಕ್ಕೆ ತಂದಿದ್ದೇನೆ ಎಂದರು.
ನನಗೆ ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ನೀಡಬೇಕು ಎಂದು ಮನವಿ ಮಾಡಿದರು.


ಕಾಂಗ್ರೆಸ್ ಪಕ್ಷ ನಮಗೆ ತಾಯಿ ರೀತಿ. ಹಾಗಾಗಿ ಪಕ್ಷಕ್ಕೆ ತೊಂದರೆಯಾಗುವಂತೆ ನಾವ್ಯಾರು ನಡೆದುಕೊಳ್ಳಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಖಾತೆ ಹಂಚಿಕೆಯನ್ನು ಸರಿ ಮಾಡಬೇಕು ಎಂದು ವರಿಷ್ಠರಲ್ಲಿ ಕೋರುತ್ತೇನೆ ಎಂದರು.


ಪಕ್ಷ ಈ ರೀತಿ ಮುಂದುವರೆದರೆ ೨೦೨೮ರ ಚುನಾವಣೆಯಲ್ಲಿ ಕಷ್ಟವಾಗಬಹುದು ಎಂಬ ಎಚ್ಚರಿಕೆಯನ್ನು ಕೆ.ಹೆಚ್. ಮುನಿಯಪ್ಪ ಹೇಳಿದರು.
ನನ್ನ ಖಾತೆಯನ್ನು ಬದಲಾವಣೆ ಮಾಡಿ ಜನ ಸೇವೆ ಮಾಡಲು ಹೆಚ್ಚು ಅವಕಾಶ ಇರುವ ಖಾತೆ ನೀಡುವಂತೆಮನವಿ ಮಾಡುತ್ತೇನೆ. ಗೊಂದಲ ಆಗಬಾರದು. ವರಿಷ್ಠರು ಎಲ್ಲವನ್ನುಸರಿ ಮಾಡುತ್ತಾರೆ ಎಂದು ನಂಬಿದ್ದೇನೆ. ಹ ರಿತನದಪ್ರಕಾರ ಖಾತೆ ಹಂಚಿಕೆ ಆಗಬೇಕು ಎಂದು ಮುನಿಯಪ್ಪ ಅವರು ಹೇಳಿದರು.

ಸುರ್ಜೆವಾಲ ನೇತೃತ್ವದಲ್ಲಿ ಸಭೆ


ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಪೋಟವಾಗಿರುವ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ಕೆ.ಜೆ. ಜಾರ್ಜ್, ಕೆ.ಹೆಚ್. ಮುನಿಯಪ್ಪ ಇವರುಗಳು ಸಭೆ ನಡೆಸಿದ್ದಾರೆ


ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಹಿರಿಯ ಸಚಿವ ರಾಮಲಿಂಗಾರೆಡ್ಡಿ ರವರ ರಾಜೀನಾಮೆ, ಖಾತೆ ಹಂಚಿಕೆಯಲ್ಲಿ ಹಿರಿಯರ ಕಡಗಣನೆ ಎಲ್ಲದರ ಬಗ್ಗೆಯೂ ಮಹತ್ವದ ಮಾತುಕತೆಗಳಾದವು ಎಂದು ಹೇಳಲಾಗಿದೆ.


ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಖಾತೆ ಹಂಚಿಕೆ ನಂತರ ನಡೆದಿರುವ ಬೆಳವಣಿಗೆಗಳ ಬಗ್ಗೆ ಈ ಎಲ್ಲ ನಾಯಕರು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.
ಎಲ್ಲ ಬೆಳವಣಿಗಳನ್ನು ವರಿಷ್ಠರ ಗಮನಕ್ಕೆ ತಂದು ಎಲ್ಲವನ್ನು ಸರಿಪಡಿಸುವ ಮಾತುಗಳನ್ನು ಸುರ್ಜೇವಾಲ ಅವರು ಈ ಸಭೆಯಲ್ಲಿ ಹೇಳಿದರು ಎಂದು ಹೇಳಲಾಗಿದೆ.