
ಹುಳಿಯಾರು, ಜೂ. ೧- ಮಳೆ ಬಂದರೆ ಸಾಕು ಹುಳಿಯಾರಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೬೯ ರಸ್ತೆಯು ಮಿನಿ ಕೆರೆಯಾಗಿ ಮಾರ್ಪಡುತ್ತಿದೆ. ಕಳಪೆ ಹಾಗೂ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ಸಾರ್ವಜನಿಕರು ಮತ್ತು ಸ್ಥಳೀಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಮೊಳಕಾಲುದ್ದದ್ದ ನೀರು ನಿಂತು ವಾಹನ ಸಂಚಾರಕ್ಕೆ ಭಾರಿ ತೊಂದರೆಯುಂಟಾಗಿತ್ತು.
ಮಂಗಳೂರುನಿಂದ ವಿಶಾಖಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹುಳಿಯಾರು ಪಟ್ಟಣದಲ್ಲಿ ಕಳೆದ ಆರೇಳು ವರ್ಷಗಳಿಂದ ನಡೆಯುತ್ತಿದ್ದರೂ ಸಹ ಇದೂವರೆವಿಗೂ ಪೂರ್ಣವಾಗಿಲ್ಲ. ಒಂದೊಂದು ಕಿಲೋ ಮೀಟರ್‌ಗೂ ಸಹ ಪ್ರತಿಭಟನೆ, ಧರಣಿ ಮಾಡಿ ಕಾಮಗಾರಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯ ಕರ್ಮ ಸೃಷ್ಠಿಯಾಗಿತ್ತು.
ಆಗಿರುವ ಕಾಮಗಾರಿಯೂ ಸಹ ಅವೈಜ್ಞಾನಿಕವಾಗಿದ್ದು ಸಮರ್ಪಕವಾಗಿ ಚರಂಡಿ ನೀರು ಹರಿಯುವುದಿಲ್ಲ. ಮಳೆ ಸುರಿಯುತ್ತಿದ್ದಂತೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವ ಬದಲು, ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದೆ. ಮಳೆ ನೀರಿನ ಜತೆಗೆ ಚರಂಡಿಯಲ್ಲಿ ಸಂಗ್ರಹವಾದ ತ್ಯಾಜ್ಯ ಹೆದ್ದಾರಿಯಲ್ಲೇ ನಿಲ್ಲುತ್ತಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆ ಸಂಪೂರ್ಣ ಜಲಾವೃತವಾಗುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗುತ್ತದೆ.
ಕೇವಲ ರಸ್ತೆಯಷ್ಟೇ ಅಲ್ಲ, ರಸ್ತೆ ಬದಿಯಲ್ಲಿರುವ ಮನೆಗಳು ಮತ್ತು ಅಂಗಡಿ ಮಳಿಗೆಗಳಿಗೂ ಚರಂಡಿಯ ಕೊಳಚೆ ಮಿಶ್ರಿತ ಮಳೆ ನೀರು ನುಗ್ಗುತ್ತಿದೆ. ಕಳೆದ ಎರಡು ವರ್ಷದ ಹಿಂದಷ್ಟೆ ಮಳೆ ನೀರು ನುಗ್ಗಿ ನಮ್ಮ ಈರುಳ್ಳಿ ಗೋಡನ್ ಕುಸಿದು ಬಿತ್ತು. ಅಲ್ಲದೆ ರಾತ್ರಿ ಮಳೆ ಬಂದರಂತೂ ಇಡೀ ರಾತ್ರಿ ಜಾಗರಣೆ ಮಾಡಿ ನೀರು ಬಾಚಬೇಕಿದೆ. ಅಲ್ಲದೆ ದುರ್ನಾತ ಕುಡಿಯುವ ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದು, ಆಸ್ತಿ ಪಾಸ್ತಿಗೆ ಹಾನಿಯಾಗುತ್ತಿದೆ ಎಂದು ಹಾರೂನ್ ಅವರು ತಮ್ಮ ಅಳಲು ತೋಡಿಕೊಂಡರು.
ಈ ಕುರಿತು ಕೇಂದ್ರ ಸಚಿವವಿ. ಸೋಮಣ್ಣ ಮತ್ತು ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸದರು ಖುದ್ದಾಗಿ ಗುತ್ತಿಗೆದಾರರಿಗೆ ಮತ್ತು ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದ್ದರೂ, ಕಾಮಗಾರಿಯ ಲೋಪಗಳನ್ನು ಸರಿಪಡಿಸದೆ ನಿರ್ಲಕ್ಷ್ಯಿಸಿದ್ದಾರೆ. ಚರಂಡಿಯಲ್ಲಿ ತುಂಬಿಕೊಂಡಿರುವ ಹೂಳು ಹಾಗೂ ಕಸವನ್ನು ತೆರವುಗೊಳಿಸದಿರುವುದು ಈ ಅವಾಂತರಕ್ಕೆ ಮೂಲ ಕಾರಣವಾಗಿದೆ. ಪರಿಣಾಮ ಪ್ರತಿ ಮಳೆಯಲ್ಲೂ ವಾಹನ ಸವಾರರು, ಅಕ್ಕಪಕ್ಕದ ಮನೆ ಅಂಗಡಿಯವರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ದಿನದೂಡುತ್ತಿದ್ದಾರೆ.
೨ ತಿಂಗಳ ಹಿಂದಷ್ಟೆ ಕ್ಲೀನ್ ಮಾಡಿಸಲು ಪತ್ರ
ಮಳೆ ಬಂದಾಗ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ನಿಂತು ವಾಹನ ಸಾವರರಿಗೆ ತೊಂದರೆಯಾಗುತ್ತದೆ ಎಂದು ೨ ತಿಂಗಳ ಹಿಂದಷ್ಟೆ ಕಟ್ಟಿಕೊಂಡಿರುವ ಚರಂಡಿ ಕ್ಲೀನ್ ಮಾಡಿಸಲು ಹೈವೆ ಎಂಜಿನಿಯರ್‌ಗೆ ಪತ್ರ ಬರೆಯಲಾಗಿತ್ತು. ಆದರೆ ಅವರು ನಿರ್ಲಕ್ಷ್ಯದಿಂದ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿ ನೀರು ಸರಗವಾಗಿ ಹರಿಯದೆ ರಸ್ತೆಯಲ್ಲಿ ನೀರು ನಿಂತಿತ್ತು. ಈಗಾಗಲೇ ಅವರನ್ನು ಖುದ್ದು ಕರೆಸಿ ಸಮಸ್ಯೆ ವಿವರಿಸಲಾಗಿದ್ದು ಕ್ಲೀನ್ ಮಾಡಿಸಲು ಅವರ ಬಳಿ ಯಂತ್ರವಿಲ್ಲ ಶಿರಾ ಪುರಸಭೆಯಲ್ಲಿರುವ ಯಂತ್ರ ಬಾಡಿಗೆ ತಂದು ಕ್ಲೀನ್ ಮಾಡಿಸಿದರೆ ಹಣ ಕೊಡುವುದಾಗಿ ತಿಳಿಸಿದ್ದಾರೆ. ಯಂತ್ರ ತರಿಸಿ ಕ್ಲೀನ್ ಮಾಡಿಸಲಗುವುದು
ಎಂದು ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.


































