Home ಜಿಲ್ಲೆ ಕಲಬುರಗಿ ವಸ್ತು ಸಂಗ್ರಹಾಲಯಗಳು ಜ್ಞಾನದ ಭಂಡಾರ

ವಸ್ತು ಸಂಗ್ರಹಾಲಯಗಳು ಜ್ಞಾನದ ಭಂಡಾರ

ಕಲಬುರಗಿ,ಮೇ.19: ವಸ್ತು ಸಂಗ್ರಹಾಲಯಗಳು ಜ್ಞಾನದ ಭಂಡಾರ ವಿದ್ದಂತೆ ಅವುಗಳಿಗೆ ಭೇಟಿ ನೀಡುವುದರ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿ ಕೊಳ್ಳಬಹುದು ಎಂದು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಎಸ್.ಎಸ್.ವಾಣಿ ಅವರು ಹೇಳಿದರು.
ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಇನ್ ಟ್ಯಾಕ್ ಕಲಬುರಗಿ ಅಧ್ಯಾಯ ಮತ್ತು ವಿಶ್ವನಾಥರೆಡ್ಡಿ ಮುದ್ನಾಳ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸ್ವಚ್ಛತ ಹಾಗೂ ವಸ್ತು ಸಂಗ್ರಹಾಲಯಗಳ ಅರಿವು ಕುರಿತು ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಲಂಡನ್ನಿನ ವಸ್ತು ಸಂಗ್ರಹಾಲಯ ಶ್ರೀಮಂತವಾಗಲು ಕಾರಣ ಬ್ರಿಟಿಷರು ಭಾರತದ ನಾನಾ ಭಾಗಗಳಿಂದ ಹಲವು ಅವಶೇಷಗಳನ್ನು ಹೊತ್ತುಕೊಂಡು ಹೋಗಿ ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದನ್ನು ನೋಡಿದ ಪ್ರತಿ ಒಬ್ಬರಿಗೂ ಭಾರತದ ಪರಂಪರ ಮನವರಿಕೆಯಾಗುತ್ತದೆ ಹೊರತು ಬ್ರಿಟಿಷ್ ಪರಂಪರೆ ಅಲ್ಲ ಎಂದು ಹೇಳಿದರು.
ಕಲಬುರಗಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಬೇಬಿ ಮೋಘೇರಾ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರ ಇಲಾಖೆ ಸಹಾಯಕ ನಿರ್ದೇಶಕ ಡಾ ರಾಜಾರಾಮ ಬಿ ಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಲಬುರಗಿ ವಸ್ತು ಸಂಗ್ರಹಾಲಯ 1964ರಲ್ಲಿ ಸ್ಥಾಪನೆಯಾಗಿದ್ದು ಇದು ಹಂತ ಹಂತವಾಗಿ ಹಲವು ಅವಶೇಷಗಳನ್ನು ತನ್ನಲ್ಲಿ ಸಂಗ್ರಹಿಸಿ ಕೊಂಡಿದೆ ಸುಮಾರು 700ಕ್ಕಿಂತ ಹೆಚ್ಚಿನ ಪ್ರಾಚ್ಯಾವಶೇಷಶಗಳಿದ್ದು ಅವುಗಳಲ್ಲಿ ಇತಿಹಾಸ ಪೂರ್ವ ಕಾಲದಿಂದ 18ನೇ ಶತಮಾನದವರೆಗಿನ ಅವಶೇಷಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆಎಂದು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಹಿರಿಯ ಚಿತ್ರಕಲಾವಿದ ನಾರಾಯಣ ಜೋಶಿ ಮತ್ತು ನಾಗೇಶ ಮಡಿವಾಳ ಮಾತನಾಡಿದರು.ಇತಿಹಾಸ ಪ್ರಾಧ್ಯಾಪಕಿ ಜ್ಯೋತಿ ನಿರೂಪಿಸಿ ವಂದಿಸಿದರು. ಕಲಬುರಗಿ ಇನ್ ಟ್ಯಾಕ್ಸ್ ಪದಾಧಿಕಾರಿಗಳು ಇಲಾಖೆಯ ಸಿಬ್ಬಂದಿ ವರ್ಗ ಸ್ಥಳೀಯ ನಾಗರಿಕರು ಹಾಗೂ ವಿಶ್ವನಾಥ ರೆಡ್ಡಿ ಮುದ್ದಾಳ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.