
ಜಮಖಂಡಿ ಮೆ. 7:ಸನಾತನ ಸಂಸ್ಕೃತಿಯ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ನಮ್ಮ ಸಂಸ್ಕಾರವೇ ನಮ್ಮೆಲ್ಲರ ಉನ್ನತಿಗೆ ಕಾರಣವಾಗಿದ್ದು, ಅನ್ಯ ಸಮಾಜದೊಂದಿಗೆ ಸಹಬಾಳ್ವೆ ನಡೆಸುವುದೇ ಸನಾತನ ಧರ್ಮದ ಧ್ಯೇಯವಾಗಿದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ನಗರದ ಹೊಕ್ಕಳ ಬಾವಿ ಮೈದಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಗೋತ್ರ ಹೇಳುವಾಗ ಪುರಾತನ ಋಷಿಮುನಿಗಳ ಹೆಸರನ್ನು ಉಲ್ಲೇಖಿಸುತ್ತೇವೆ. ಅವರು ಸಾವಿರಾರು ವರ್ಷಗಳ ತಪಸ್ಸಿನಿಂದ ಪಡೆದ ಫಲವನ್ನು ನಮಗೆ ನೀಡಿದ್ದಾರೆ. ಅವರ ಋಣ ತೀರಿಸಲು ಗಾಯತ್ರಿ ಮಂತ್ರದ ಅನುಷ್ಠಾನ ಹಾಗೂ ಶಾಸ್ತ್ರಗಳ ಅಧ್ಯಯನವನ್ನು ನಿರಂತರವಾಗಿ ನಡೆಸಿ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಲಕ್ಷ್ಮೀ ಶೋಭಾನೆ ಪದಗಳು, ಹರಿಕಥಾಮೃತ ಸಾರ ಇತ್ಯಾದಿಗಳ ಅಧ್ಯಯನ ಹಾಗೂ ಪಾರಾಯಣ ಮಹತ್ವದ್ದಾಗಿದೆ. ಗಂಡು ಮಕ್ಕಳಿಗೆ ಆತ್ಮೋದ್ದಾರಕ್ಕಾಗಿ ವೇದಾಧ್ಯಯನ ಮತ್ತು ದೇಹಪೆÇೀಷಣೆಗೆ ಲೌಕಿಕ ವಿದ್ಯೆ ಎರಡನ್ನೂ ಸಮನಾಗಿ ಕಲಿಯಬೇಕು. ಈ ಮೂಲಕ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ತಿಳಿಸಿದರು.
ಸೂರ್ಯನಿಂದ ಹೊರಗಿನ ಕತ್ತಲು ದೂರವಾಗುತ್ತದೆ. ಹಾಗೆಯೇ ಅಜ್ಞಾನ ಎಂಬ ಒಳಗಿನ ಕತ್ತಲನ್ನು ದೂರ ಮಾಡಲು ಸೂರ್ಯನಾರಾಯಣನ ಕೃಪೆ ಅಗತ್ಯ. ಅದಕ್ಕಾಗಿ ಗಾಯತ್ರಿ ಮಂತ್ರದ ನಿರಂತರ ಅನುಷ್ಠಾನ ನಡೆಯಬೇಕು ಎಂದು ಹೇಳಿದರು. ಸನಾತನ ಸಂಸ್ಕೃತಿಯ ಅರಿವು ಮೂಡಿಸಲು ಶಿಬಿರಗಳನ್ನು ಆಯೋಜಿಸಬೇಕು ಮತ್ತು ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ವಟುಗಳಿಗೆ ಶ್ರೀಗಳಿಂದ ಬ್ರಹ್ಮೋಪದೇಶ ನೀಡಲಾಯಿತು.
ರಾಜೇಂದ್ರ ಹುಲ್ಯಾಳಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಶುಭಶ್ರೀ ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಮೈಗೂರಿನವರು ಆಚಾರ-ಅನಿಸಿಕೆಗಳನ್ನು ಹಂಚಿಕೊಂಡರು. ಎಸ್.ಎಲ್. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ ಕುಲಕರ್ಣಿ ವಂದಿಸಿದರು.


























