Home ಜಿಲ್ಲೆ ಮೈಸೂರು ಶೀಘ್ರದಲ್ಲೇ ನಾಯಕತ್ವ ಬದಲಾವಣೆ

ಶೀಘ್ರದಲ್ಲೇ ನಾಯಕತ್ವ ಬದಲಾವಣೆ

ಸಂಜೆವಾಣಿ ನ್ಯೂಸ್
ಮೈಸೂರು:ಏ.28:-
ರಾಜ್ಯದಲ್ಲಿ ಕಳೆದ ಆರೇಳು ತಿಂಗಳಿಂದ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕದನ ನಿರ್ಣಾಯಕ ಹಂತಕ್ಕೆ ಬಂದಿದ್ದು, ಶಿಘ್ರದಲ್ಲೇ ಆಡಳಿತ ಪಕ್ಷದ ನಾಯಕತ್ವ ಬದಲಾವಣೆ ಆಗುವ ಸಂಭವವಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುರ್ಚಿ ಕಾದಾಟದಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬರುವ ಮೇ ತಿಂಗಳಲ್ಲಿ ಆಡಳಿತ ಪಕ್ಷದ ನಾಯಕತ್ವ ಬದಲಾವಣೆ ಆಗುವ ಸಂಭವವಿದೆ. ಹೊಸ ಮುಖ್ಯಮಂತ್ರಿ ಬಂದು ಯಾವ ರೀತಿ ಸ್ಪಂದಿಸುತ್ತಾರೆಂದು ನೋಡಬೇಕಿದೆ ಎಂದು ಹೇಳಿದರು.
ಹಾಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಭಾವನೆಗಳಿಗೆ ಸ್ಪಂದಿಸಲಿಲ್ಲ. ಹಬ್ಬ ಹರಿದಿನಗಳಲ್ಲಿ ಮಾಂಸ ತಿನ್ನುತ್ತಿದ್ದೆ ಎಂದು ಹೇಳಿದ್ದಾರೆ. ಮಾಂಸ ತಿನ್ನುವವರು ಕೂಡ ವಾರದಲ್ಲಿ ಒಂದು ದಿನ ತಿನ್ನುವುದಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ರಾಜ್ಯದ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ಮುಂಬರುವ ಸಿಎಂ ಆದರೂ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಲಿ ಎಂದರು.
ಉಪ ಚುನಾವಣೆ ಪ್ರಚಾರದ ವೇಳೆ ಅಲ್ಪಸಂಖ್ಯಾರು ಬಿಜೆಪಿ ಪರ ಒಲವು ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿದ ಅವರು, ದೇಶದ ಹಲವು ರಾಜ್ಯಗಳಲ್ಲಿ ಮುಸ್ಲಿಮರು ಬಿಜೆಪಿ ಜತೆಯಲ್ಲಿದ್ದಾರೆ. ಆದರೆ, ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಇರಲಿಲ್ಲ. ಇದೀಗ ಎರಡು ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ವೇಳೆ ಮುಸ್ಲಿಮರು ಬಿಜೆಪಿ ಜತೆ ನಿಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ನಿಂತಿರುವುದು ಒಳ್ಳೆಯದು. ಬಿಜೆಪಿ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದೆ ಎಂದರು.


ಗೋವುಗಳ ಸಂತತಿ ಉಳಿವಿಗೆ ಮನವಿ: ಗೋ ಮಾತಾ ಗೌರವ ದಿನದ ಅಂಗವಾಗಿ ಗೋವುಗಳ ಸಂತತಿ ಉಳಿಸುವಂತೆ ನಗರದ ಮಿನಿ ವಿಧಾನಸೌಧದಲ್ಲಿ ಹೆಚ್ಚುವರಿ ತಹಶಿಲ್ದಾರ್‍ಗೆ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿ, ಗೋವುಗಳ ಸಂತತಿ ಉಳಿವಿಗೆ, ರಕ್ಷಣೆಗೆ ಆಗ್ರಹಿಸಿ 15 ಅಂಶಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಲಾಗಿದೆ. ಮೈಸೂರಿನ ಪಿಂಜರಾಪೆÇೀಲ್ ಸಂಸ್ಥೆಯಲ್ಲಿ 10 ಸಾವಿರಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ.


ಗೋವಿನ ಹಾಲಿನ ಜತೆಗೆ ಸಗಣಿಗೂ ಬೆಲೆ ಬರುವಂತಾದರೆ ಗೋವುಗಳ ರಕ್ಷಣೆ ಆಗುತ್ತದೆ. ಇದರಿಂದ ಗೋಪಾಲಕರಿಗೂ ಅನುಕೂಲವಾಗಲಿದೆ. ಈ ಬಗ್ಗೆ ಸೂಕ್ತ ಸಲಹೆ ನೀಡುವಂತೆ ಸುತ್ತೂರು ಶ್ರೀ ಮತ್ತು ವೀರೇಂದ್ರ ಹೆಗ್ಗಡೆ ಅವರನ್ನು ಕೋರಲಾಗುವುದು. ಕೆ.ಆರ್.ಕ್ಷೇತ್ರದ ನಾಚನಹಳ್ಳಿ ಪಾಳ್ಯದಲ್ಲಿ ಅಂಗಡಿಯೊಂದರ ಮುಂಭಾಗದಲ್ಲಿ ಹಸು ಕರುಗಳನ್ನು ಕೊಂದು ಮಾಂಸ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಸ್ವತಃ ನಾನೇ ಮುಂದಾಗಿ ತಡೆದಿದ್ದೇನೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಒಂದು ವಾರದ ಹಿಂದೆ ಅಂಗಡಿ ಬಾಗಿಲು ಮುಚ್ಚಿಸಿದೆ. ಹಸು ಕರುಗಳನ್ನು ಕಡಿದರೆ ನಾನು ಸುಮ್ಮನಿರಲ್ಲ ಎಂದು ಎಚ್ಚರಿಸಿದರು.