Home ಜಿಲ್ಲೆ ಹಳ್ಳಿಖೇಡ್ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹ

ಹಳ್ಳಿಖೇಡ್ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹ

ಬೀದರ್, ಏ. ೨೯: ಬೀದರ್ ಜಿಲ್ಲೆಯ ಹಳ್ಳಿಖೇಡ್ (ಬಿ)ಯಲ್ಲಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಶಕ್ಕೆ ಪಡೆದು ತಕ್ಷಣ ಪುನರಾರಂಭ ಮಾಡಬೇಕು ಹಾಗೂ ರೈತರ ಎಲ್ಲಾ ವಿಧದ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ ಮೋರ್ಚಾ ಜಿಲ್ಲಾ ಘಟಕ, ಬೀದರ್ ವತಿಯಿಂದ ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿ ಮುಖೇನ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಬೀದರ್ ಜಿಲ್ಲೆಯ ಮೊಟ್ಟಮೊದಲ ಸಹಕಾರಿ ವಲಯದ ಸಕ್ಕರೆ ಕಾರ್ಖಾನೆ ಆಗಿರುವ ಹಳ್ಳಿಖೇಡ್ ಸಕ್ಕರೆ ಕಾರ್ಖಾನೆಯಲ್ಲಿ ಜಿಲ್ಲೆಯ ಅನೇಕ ರೈತರು ಷೇರುಗಳನ್ನು ಖರೀದಿಸಿದ್ದು, ಎರಡು ವರ್ಷಗಳಿಂದ ಸರ್ಕಾರದ ಅನುಮತಿ ಇಲ್ಲದೆ ಕಾರ್ಖಾನೆ ಮುಚ್ಚಲ್ಪಟ್ಟಿರುವುದರಿಂದ ರೈತರು ಹಾಗೂ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಲಾಗಿದೆ.

ಇತ್ತೀಚಿನ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ರೈತರ ಬೆಳೆಗಳು ಹಾನಿಗೊಳಗಾಗಿದ್ದು, ಬೆಳೆದ ಬೆಳೆಗಳಿಗೆ ಸಮರ್ಪಕ ಮತ್ತು ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವು ರೈತರ ಎಲ್ಲಾ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಶಿವರಾಯ ಮುದಾಳೆ (ಗೌರವಾಧ್ಯಕ್ಷರು, ಸಂಯುಕ್ತ ಕಿಸಾನ ಮೋರ್ಚಾ ಬೀದರ್), ಮಲ್ಲಿಕಾರ್ಜುನ ಸ್ವಾಮಿ (ಜಿಲ್ಲಾಧ್ಯಕ್ಷರು), ವೀರಾರೆಡ್ಡಿ ಪಾಟೀಲ್ (ರಾಜ್ಯ ಮಂಡಳಿಯ ಆಹ್ವಾನಿತರು), ಮಾರುತಿ ಬೌದ್ಧೆ (ರಾಜ್ಯ ಸಂಚಾಲಕರು, ಡಿ.ಎಸ್.ಎಸ್. ಬೀದರ್), ಬಾಬುರಾವ ಹೊನ್ನಾ (ರಾಜ್ಯ ಉಪಾಧ್ಯಕ್ಷರು), ಖಾಸಿಮ್ ಅಲಿ (ರಾಜ್ಯ ಉಪಾಧ್ಯಕ್ಷರು), ಶಿವರಾಜ ಪಾಟೀಲ್ ಅತಿವಾಳ (ರೈತ ಮುಖಂಡರು), ಖಮರ್ ಪಟೇಲ್ (ಬೀದರ್ ತಾಲೂಕು ಅಧ್ಯಕ್ಷರು), ಸೂರ್ಯಕಾಂತ ಮಟಕಟ್ಟಿ (ಬಸವಕಲ್ಯಾಣ ತಾಲೂಕು ಅಧ್ಯಕ್ಷರು), ನಜೀರ್ ಅಹ್ಮದ್ (ಜಿಲ್ಲಾಧ್ಯಕ್ಷರು), ಶಫಾಯತ್ ಅಲಿ, ಜೈಶೀಲಕುಮಾರ, ಅರುಣ್ ಪಟೇಲ್ (ಜಿಲ್ಲಾ ಸಂಚಾಲಕರು, ಡಿ.ಎಸ್.ಎಸ್.), ನನ್ನೇಸಾಬ್ ಟಿ. ಮಿರ್ಜಾಪೂರ ಹಾಗೂ ಮುನಿರೋದ್ದೀನ್ ಬಗದಲ್ ಉಪಸ್ಥಿತರಿದ್ದರು.