
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.28: ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಮೇ.20ರ ಬುಧವಾರ ಪಟ್ಟಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು ತಾಲೂಕಿನ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ನೋಂದಾಯಿಸಿಕೊಳ್ಳಬೇಕು ಎಂದು ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಗಂಜಿಗೆರೆ ಮಹೇಶ್ ತಿಳಿಸಿದರು.
ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಟ್ರಸ್ಟ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ದಿನಾಂಕ: 20-05-2026 ರ ಬುಧವಾರ ಬೆಳಿಗ್ಗೆ 11.ಗಂಟೆಗೆ ಟ್ರಸ್ಟ್’ನ ವತಿಯಿಂದ ಪ್ರತಿಭಾ ಪುರಸ್ಕಾರ ನಡೆಯಲಿದೆ. 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಸ್ಟೇಟ್ ಸಿಲಬಸ್ (ರಾಜ್ಯ ಪಠ್ಯಕ್ರಮ) ಪರೀಕ್ಷೆಯಲ್ಲಿ ಶೇ.95% ಅಂಕಗಳು, ಎಸ್.ಎಸ್.ಎಲ್.ಸಿ ಸಿಬಿಎಸ್ ಸಿ (ಕೇಂದ್ರೀಯ ಪಠ್ಯಕ್ರಮ) ಪರೀಕ್ಷೆಯಲ್ಲಿ ಶೇ.85% ಅಂಕಗಳು ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಐಸಿಐಸಿ ಶೇ.85% ರಷ್ಟು ಅಂಕಗಳನ್ನು ಪಡೆದಿರುವ ಹಾಗೂ 2025-26 ನೇ ಸಾಲಿನ ಪಿ.ಯು.ಸಿ ಪರೀಕ್ಷೆಯಲ್ಲಿ (ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗ) ಶೇ.90% ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ ಮತ್ತು ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜಿನ ಕಾಲೇಜು ಹಂತದಲ್ಲಿ ಅತೀ ಹೆಚ್ಚು ಅಂಕ ಪಡೆದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀಶ್ರೀಶ್ರೀ ಸಿದ್ಧಲಿಂಗ ಸ್ವಾಮೀಜಿ ರವರು ಹಾಗೂ ವಿವಿಧ ಮಠಗಳ ಸ್ವಾಮೀಜಿರವರು ಹಾಗೂ ಗಣ್ಯರು ಭಾಗವಹಿಸುತ್ತಾರೆ. ಇಂದಿನಿಂದ ಅರ್ಜಿ ಸ್ವೀಕಾರ ಕಾರ್ಯವನ್ನು ಆರಂಭಿಸಿದ್ದು ಮೇ.16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಟ್ರಸ್ಟ್ ನ ಕಛೇರಿಯಲ್ಲಿ ಅರ್ಜಿ ನಮೂನೆ ಪಡೆದುಕೊಳ್ಳುವುದು. ಅರ್ಜಿಯೊಂದಿಗೆ ದೃಢೀಕೃತ ಅಂಕ ಪಟ್ಟಿ, ಆಧಾರ್ ಕಾರ್ಡ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ 3 ಪೆÇೀಟೊ ಸಲ್ಲಿಸಬೇಕು ಎಂದು ಮಹೇಶ್ ತಿಳಿಸಿದರು. ಹೆಚ್ಚಿನ ವಿವರಗಳಿಗೆ ಟ್ರಸ್ಟ್ ನ ದೂರವಾಣಿ ಸಂಖ್ಯೆ 08230-200235 ಅಥವಾ 9731279740 ಸಂಪಕಿಸಲು ಕೋರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಜೇಂದ್ರ ಕುಮಾರ್, ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷೆ ನಳಿನಿ, ಉದಯ ರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ಹರಿಚರಣತಿಲಕ್. ಕೆ.ಆರ್.ನೀಲಕಂಠ, ಕನ್ನಡ ಪಂಡಿತ ಚಾ.ಶಿ ಜಯಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಟಿ.ವೈ.ಆನಂದ್, ಶಿಕ್ಷಕ ಸಣ್ಣೇಗೌಡ, ಮಾಕವಳ್ಳಿ ಸುಮಿತ್ ಉಪಸ್ಥಿತರಿದ್ದರು.

























