
ಕೋಲಾರ,ಏ,೧೬- ಎಳೆಯ ಮನಸ್ಸುಗಳಲ್ಲಿ ಜಾತಿಯ ವಿಷಬೀಜ ಬಿತ್ತಬಾರದು. ಎಳೆಯ ಮನಸ್ಸುಗಳು ಎಂದೂ ಕಲುಷಿತಗೊಳ್ಳಬಾರದು. ಅಂಬೇಡ್ಕರ್ ಜೀವಿತ ಧರ್ಮವಾಗಬೇಕು ಎಂದು ಅಂಬೇಡ್ಕರ್ವಾದಿ ಅರಿವು ಶಿವಪ್ಪ ಕರೆ ನೀಡಿದರು.
ಕೋಲಾರ ಕ್ರೀಡಾ ಸಂಘದ ವತಿಯಿಂದ ನಗರದ ಟೇಕಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಮಕ್ಕಳ ಉಧ್ಯಾನವನದಲ್ಲಿ ಡಿ. ಸುಧಾಕರ್ ಸ್ಮರಣಾರ್ಥ ಉಚಿತ ಬೇಸಿಗೆ ತರಬೇತಿ ಶಿಬಿರದಲ್ಲಿ ಆಯೋಜಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ಅಂಬೇಡ್ಕರ್ ಒಂದು ಜಾತಿಗೆ ಸೀಮಿತ ಮಾಡಬಾರದು ಅವರು ಈ ದೇಶಕ್ಕೆ ಸಂವಿಧಾನ ನೀಡಿದ ಮಹನೀಯರು, ಸಮಾಜದಲ್ಲಿ ಸಮಾನತೆಯ ಬೆಳಕು ಕಾಣಲು ಕಾರಣರಾದವರು ಎಂದು ಅಭಿಪ್ರಾಯಪಟ್ಟರು.
ಕ್ರೀಡಾ ಸಂಘದ ಹಿರಿಯ ಸದಸ್ಯ ಪುರುಷೋತ್ತಮ ಮಾತನಾಡಿ, ನಾವು ಜಾತಿ, ಜಾತಿ ಎಂಬ ಕನವರಿಕೆಯಿಂದ ಹೊರ ಬಂದಲ್ಲಿ ಮಾತ್ರ ಜಾತಿ ದೂರವಿಡಲು ಸಾಧ್ಯ. ಕೋಲಾರ ಕ್ರೀಡಾ ಸಂಘ ಜಾತಿ, ಬಣ್ಣ ರಹಿತವಾಗಿಯೇ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಕಳೆದ ೩೯ ವರ್ಷಗಳಿಂದ ಬೇಸಿಗೆ ಶಿಬಿರವನ್ನು ನಡೆಸಿಕೊಂಡು ಬಂದಿರುವುದಲ್ಲದೇ ಕಳೆದ ಇಪ್ಪತೈದು ವರ್ಷಗಳಿಂದ ಸಂಘದ ಉಪಾಧ್ಯಕ್ಷರುಗಳಾದ ಜೆ.ಪಿ ಮತ್ತು ಅಪ್ಪಿ ನಾರಾಯಣಸ್ವಾಮಿ ಉಸ್ತುವಾರಿಯಲ್ಲಿ, ಸಾಮಾ ಬಾಬುರವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.
ಸಂಘದ ಉಪಾಧ್ಯಕ್ಷ ಜಯಪ್ರಕಾಶ್, ಮಕ್ಕಳಿಗೆ ಅಂಬೇಡ್ಕರ್ ಜೀವನ ಮತ್ತು ಆದರ್ಶಗಳ ಬಗ್ಗೆ ತಿಳಿಸಿ ಅದನ್ನು ಜೀವನದಲ್ಲಿ ಅಳವಡಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಾಮಾ ಅನಿಲ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರ ಸಭೆ ನಿಕಟಪೂರ್ವ ಉಪಾಧ್ಯಕ್ಷೆ ಸಂಗೀತ ಜಗದೀಶ್, ತರಬೇತುದಾರರಾದ ಸುರೇಶ್ ಬಾಬು (ಕಮಾಂಡೋ), ರಾಧೇಯ, ಹಿರಿಯ ಖೋಖೋ ಆಟಗಾರ್ತಿ ಪದ್ಮಾ ಕಾಮತ್, ಸಹಾಯಕ ತರಬೇತುದಾರರಾದ ಅಭಿರಾಮ್, ನಂದೀಶ್, ಪವಿತ್ರ, ಜಾನ್, ಬಾಲಾಜಿ, ಭಾಗವಹಿಸಿದ್ದರು. ಕುಮಾರಿ ಲಿಖಿತ ಮತ್ತು ತಂಡ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಹರೀಶ್ ಬಾಬು ಕಾರ್ಯಕ್ರಮ ನಿರೂಪಿಸಿ, ಹಿರಿಯ ತರಬೇತುದಾರರಾದ ಕೃಷ್ಣಮೂರ್ತಿ ಮತ್ತು ಉಪಾಧ್ಯಕ್ಷ ಅಪ್ಪಿ ನಾರಾಯಣಸ್ವಾಮಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
























