
ಕಲಬುರ್ಗಿ:ಏ.16: ರಾಜ್ಯ ಸರ್ಕಾರವು ಹಿಂದಿ ಭಾಷೆಯನ್ನೊಳಗೊಂಡಂತೆ ತ್ರಿತೀಯ ಭಾಷೆಗಳಿಗೆ ಅಂಕಗಳನ್ನು ನೀಡುವುದನ್ನು ಕೈಬಿಟ್ಟು ಗ್ರೇಡ್ ನೀಡುವ ನಿರ್ಧಾರ ಕೈಗೊಳ್ಳಲು ಇಚ್ಚಿಸಿದ್ದ ಅವೈಜ್ಞಾನಿಕ ಆದೇಶಕ್ಕೆ ಹೈಕೋರ್ಟ್ ಇಂದು ತಡೆ ನೀಡಿದ್ದು ಈ ಹಿಂದಿನಂತೆ ಯಥಾ ಪ್ರಕಾರ ಅಂಕಗಳನ್ನು ಪರಿಗಣಿಸಿ ಗ್ರೇಡಿಂಗ್ ನೀಡುವ ಪದ್ಧತಿಯನ್ನು ಕೈ ಬಿಡಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೆಶನ ನೀಡಿದೆ. ಇದು ರಾಜ್ಯ ಸರ್ಕಾರದ ವಿರುದ್ಧ ನಾಡಿನ ಸಮಸ್ತ ಶಿಕ್ಷಕರ ಗೆಲುವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯ ಸರಕಾರವು ತರಾತುರಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ನಡೆಯುತ್ತಿರುವ ಸಂಧರ್ಭದಲ್ಲಿ ಕೇವಲ ರಾಜಕೀಯ ದುರುದ್ದೇಶವನ್ನು ಇಟ್ಟುಕೊಂಡು ಹಿಂದಿ ಭಾಷೆಯನ್ನು ಗುರಿಯಾಗಿಸಿ ಏಕಾಏಕಿ ತೃತೀಯ ಭಾಷೆಗೆ ಅಂಕಗಳನ್ನು ನೀಡುವ ಪದ್ಧತಿಯನ್ನು ಕೈಬಿಟ್ಟು ಗ್ರೇಡಿಂಗ್ ಪದ್ಧತಿ ಜಾರಿಗೆ ತರಲು ನಿರ್ಧರಿಸಿತ್ತು. ಇದರಿಂದಾಗಿ ಕೇವಲ ಹಿಂದಿ ಭಾಷೆಯಷ್ಟೇ ಅಲ್ಲದೆ ಕನ್ನಡ, ಮರಾಠಿ, ತೆಲುಗು, ತಮಿಳು, ಸಂಸ್ಕøತ ಹಾಗೂ ಇತರೆ ಭಾಷೆಗಳನ್ನೂ ಕೂಡ ಬಲಿಪಶುವನ್ನಾಗಿಸಲು ಸರ್ಕಾರ ಹೊರಟಿತ್ತು. ಈ ನಿರ್ಧಾರವು ಎಸ್.ಎಸ್.ಎಲ್.ಸಿ ಪರೀಕ್ಷಾ ಅಂಕಗಳನ್ನು 625 ಕ್ಕೆ ಬದಲಾಗಿ 525 ಕ್ಕೆ ಇಳಿಸಿ ಹಿಂದಿಯನ್ನು ಒಳಗೊಂಡಂತೆ ಎಲ್ಲಾ ತೃತೀಯ ಭಾಷೆಗಳ ಮಹತ್ವವನ್ನು ಕಳೆಯುವ ಹಾಗೆ ಮಾಡಿತ್ತು.
ಇದರಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಜೊತೆಗೆ ಸಾವಿರಾರು ಶಿಕ್ಷಕರು ಗೊಂದಲಕ್ಕೊಳಗಾಗಿದ್ದರು. ಕೇವಲ ರಾಜಕೀಯಗೋಸ್ಕರ ಹಿಂದಿ ಭಾಷೆಯನ್ನು ವಿರೋಧ ಮಾಡುವುದು ಎಷ್ಟು ಸರಿ ಈ ನಿರ್ಧಾರಕ್ಕೆ ಯಾವುದೇ ಶಿಕ್ಷಣ ತಜ್ಞರ, ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಸಲಹೆಗಳನ್ನು ಪಡೆಯದೇ ತುರ್ತಾಗಿ ಈ ಅವೈಜ್ಞಾನಿಕ ಆದೇಶ ಹೊರಡಿಸಿದ್ದು ತಪ್ಪು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೆಶನ ನೀಡಿದ್ದನ್ನು ನಾನು ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಸ್ವಾಗತಿಸುತ್ತೇನೆ. ಹಾಗೆಯೇ ರಾಜ್ಯ ಸರ್ಕಾರ ಮಾನ್ಯ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಈ ಹಿಂದಿನಂತೆ ಇದ್ದ ನಿಯಮಗಳನ್ನು ಪಾಲಿಸುವಂತೆ ಆಗ್ರಹಿಸುತ್ತೇನೆ.
ವಿಶೇಷವಾಗಿ ನಿಜಾಮರ ಆಳ್ವಿಕೆಗೆ ಒಳಪಟ್ಟ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳು ತೃತಿಯ ಭಾಷೆಯಾಗಿ ಪ್ರತಿಷತ ಶೇ 75 ರಷ್ಟು ಹಿಂದಿ ಭಾಷೆಯನ್ನೆ ತೆಗೆದುಕೊಳ್ಳುತ್ತಾರೆ. ಹಾಗೂ ರಾಜ್ಯದ ಇತರೆ ಗಡಿಭಾಗದ ಜನರು ತಮ್ಮ ತಮ್ಮ ವ್ಯವಹಾರಿಕ ಭಾಷೆಗಳನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಇದರಲ್ಲಿ ಅದೇಷ್ಟೋ ವಿದ್ಯಾರ್ಥಿಗಳು ನಮ್ಮ ನಾಡಿನ ಭಾಷೆಯಾದ ಕನ್ನಡವನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿತ್ತು.
ಹಾಗೂ ಇದರಿಂದಾಗಿ ದೇಶದಲ್ಲಿ ಹೆಚ್ಚಾಗಿ ಬಳಸುವ ಹಿಂದಿ ಭಾಷೆಯು ತನ್ನ ಮಹತ್ವವನ್ನೆ ಕಳೆದುಕೊಳ್ಳುವಂತಾಗುತಿತ್ತು. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ, ಮೊದಲು ನಮ್ಮ ಆದ್ಯತೆಯ ಭಾಷೆ ನಮ್ಮ ಮಾತೃ ಭಾಷೆ ಕನ್ನಡವೆ. ಆದರೆ ಬೇರೆ ರಾಜ್ಯಗಳಿಗೆ ನಾವು ಹೋದಾಗ ವ್ಯವಹಾರಕ್ಕಾದರೂ ಹಿಂದಿ ಭಾಷೆ ತಿಳಿಯಲೇ ಬೇಕು. ಸರ್ಕಾರವು ಮಾಡಿದ ಗ್ರೇಡಿಂಗ್ ಪದ್ಧತಿ ನೀಡಬೇಕೆನ್ನುವ ಈ ಆದೇಶ ಹೊರಡಿಸಿದ ದಿನದಿಂದಲೇ ನಾನು ಹಿಂದಿ ಹಾಗೂ ಇತರೆ ತೃತೀಯ ಭಾಷಾ ಶಿಕ್ಷಕರ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ಮಾಡಿದ್ದೆ. ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಸಲಹೆ ಸೂಚನೆಯನ್ನು ನೀಡಿದ್ದೆ. ಇಂದು ಮಾನ್ಯ ಘನ ನ್ಯಾಯಾಲಯವು ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿ ಹಿಂದಿನಂತೆ ಅಂಕ ಪದ್ದತಿಯನ್ನೇ ಮುಂದುವರಿಸುವಂತೆ ನಿರ್ದೇಶನ ನೀಡಿದ್ದು ಇದು ರಾಜ್ಯದ ತೃತೀಯ ಭಾಷಾ ಶಿಕ್ಷಕರಿಗೆ ಸಂದ ಜಯವಾಗಿದೆ.






















