
ಕಲಬುರಗಿ : ಏ.16:ಹನ್ನೆರಡನೇ ಶತಮಾನದ ಮಹಾನ್ ಸಮಾಜ ಸುಧಾರಕ, ದಾರ್ಶನಿಕ ಮತ್ತು ವಚನಕಾರ ಬಸವಣ್ಣನವರ ತತ್ವಗಳು ಇಂದಿನ ಸಂಕೀರ್ಣ ಜಗತ್ತಿನಲ್ಲಿ ಅತ್ಯಂತ ಪ್ರಸ್ತುತವಾಗಿವೆ. ಅವರ ಚಿಂತನೆಗಳು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗದೆ, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಬಸವಣ್ಣನವರು ಸಾರ್ವಕಾಲಿಕವಾಗಿ ಪ್ರಸ್ತುತವಾಗಿದ್ದಾರೆ ಎಂದು ಚಿಂತಕ, ಶಿಕ್ಷಣ ತಜ್ಞ ಗೌಡೇಶ ಬಿರಾದಾರ ಅಭಿಮತಪಟ್ಟರು. ನಗರದ ಹೊರವಲಯದ ಉಪಳಾಂವನ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಬಸವ ಜಯಂತಿ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗುತ್ತಿರುವ ಸರಣಿ ಉಪನ್ಯಾಸ ಮಾಲಿಕೆ-4ರಲ್ಲಿ ಗುರುವಾರ ಜರುಗಿದ “ಬಸವಣ್ಣನವರ ಪ್ರಸ್ತುತತೆ” ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಬಳಗದ ಅಧ್ಯಕ್ಷ,ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವಿಶ್ವಗುರು ಬಸವಣ್ಣನವರು
ಸಾಮಾಜಿಕ ಸಮಾನತೆ ಮತ್ತು ಜಾತಿ ರಹಿತ ಸಮಾಜ ನಿರ್ಮಾಣ, ಕಾಯಕ ಮತ್ತು ದಾಸೋಹ ತತ್ವ, ಲಿಂಗ ಸಮಾನತೆ, ಅನುಭವ ಮಂಟಪ ಸ್ಥಾಪನೆಯ ಮೂಲಕ – ಪ್ರಜಾಪ್ರಭುತ್ವಕ್ಕೆ ನಾಂದಿ, ಮೌಢ್ಯತೆ ವಿರೋಧಿ, ವೈಚಾರಿಕತೆ ಬೆಳವಣಿಗೆ, ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿ, ಕನ್ನಡವನ್ನು ಬೆಳೆಸಿರುವುದು,
ಬಸವಣ್ಣನವರ ದಿವ್ಯಜೀವನ ಮತ್ತು ಅವರ ಚಿಂತನೆಗಳು ಇಂದಿನ ಸಂಘರ್ಷಮಯ ಜಗತ್ತಿಗೆ ಶಾಂತಿ, ಸಮಾನತೆ ಮತ್ತು ಸಹಬಾಳ್ವೆಯ ಮಾರ್ಗವನ್ನು ತೋರುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಬಳಗದ ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಅಧ್ಯಕ್ಷೆ ಓಂದೇವಿ ಬಿರಾದಾರ,ಶಿಕ್ಷಕಿ ಸಂಗೀತಾ ಪಾಟೀಲ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.





















