
ಕೋಲಾರ,ಏ,೧೬- ಸಮಾಜದಲ್ಲಿ ಮೀಸಲಾತಿ ಹೆಚ್ಚಾಗಿ ಪಡೆದಿರುವುದು ಹಿಂದುಳಿದ ಮತ್ತು ಆಲ್ಪಸಂಖ್ಯಾತರು ಎಂಬ ಅರಿವು ಇದ್ದರೂ ಸಹ ದಲಿತರತ್ತ ಬೆರಳು ತೋರಿಸಿ ಸಮಾಜವನ್ನು ದಿಕ್ಕು ತಪ್ಪಿಸುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ, ಮೀಸಲಾತಿಯ ಕುರಿತು ಸಮರ್ಪಕ ಅರಿವು ಇಲ್ಲದವರು ಈ ವಿಷಯವನ್ನು ಹರಡುತ್ತಿರುವುದು ಖೇದನೀಯ ಸಂಗತಿಯಾಗಿದೆ ಎಂದು ಮಾಜಿ ತಾಲ್ಲೂಕು ತಾಲ್ಲೂಕು ಪಂಚಾಯಿತಿ ಸದಸ್ಯ ನಾಗನಾಳ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿನ ಡಾ,ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ ಈ ಹಿಂದೆ ಸಮಾಜದಲ್ಲಿ ಅಸ್ಪಶ್ಯರನ್ನು ಬಹಳ ಹೀನಾಯವಾಗಿ ಕಾಣಲಾಗುತ್ತಿದೆ.ಸಮಾಜದಲ್ಲಿ ಜಾತೀಯತೆ ಪಿಡುಗು ವ್ಯಾಪಿಸಿದ್ದು ಅಸ್ಪಶ್ಯತೆ ತಾಂಡವಾಡುತ್ತಿತ್ತು ಎಂದರು.
ಹಳ್ಳಿಗಳಲ್ಲಿ ದಲಿತ ವರ್ಗದ ಹೆಣ್ಣು ಮಕ್ಕಳಿಗೆ ಕುಡಿಯಲು ಬಾವಿಯಲ್ಲಿ ನೀರು ಸೇದಲು ಅವಕಾಶ ಕೊಡುತ್ತಿರಲಿಲ್ಲ. ಸರದಿಯ ಸಾಲಿನಲ್ಲಿ ನಿಂತು ಕಾಯ ಬೇಕಾಗಿತ್ತು ಸವರ್ಣಿಯರು ಯಾರಾದರೂ ಬಂದು ಬಾವಿಯಲ್ಲಿನ ನೀರನ್ನು ಸೇದಿ ಅವರು ತಂದ ಮಡಿಕೆ, ಬಿಂದಿಗೆಗಳಿಗೆ ಸುರಿಯುತ್ತಿದ್ದರು ಇದೊಂದು ಅಮಾನವೀಯ ವರ್ತನೆಯಾಗಿದೆ. ಗ್ರಾಮದ ದೇವಾಲಯಗಳಿಗೆ ದಲಿತರಿಗೆ ಪ್ರವೇಶ ಇರಲಿಲ್ಲ. ಸವರ್ಣಿಯರ ವಾಸಿಸುವ ಸ್ಥಳದಲ್ಲಿ ದಲಿತರಿಗೆ ವಾಸಿಸಲು ಅವಕಾಶ ಇರಲಿಲ್ಲ. ಊರಿನ ಹೊರಗೆ ಪ್ರತ್ಯೇಕವಾದ ಜಾಗದಲ್ಲಿ ವಾಸಿಸ ಬೇಕಾಗಿತ್ತು. ಶಾಲೆಗಳಲ್ಲಿ ದಲಿತ ಮಕ್ಕಳನ್ನು ಪ್ರತ್ಯೇಕವಾಗಿ ಕಾಣಲಾಗುತ್ತಿತ್ತು ಎಂದು ವಿವರಿಸಿದ ಅವರು ಇವೆಲ್ಲವೂ ಮಾನವ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು
ಈ ಎಲ್ಲಾ ಶೋಷಣೆ, ದೌರ್ಜನ್ಯಗಳಿಗೆ ಆಸ್ಪಶ್ಯತೆಗೆ ಮುಕ್ತಿ ಕಾಣಿಸಲು ಅಂಬೇಡ್ಕರ್ ಅವರು ನೀಡಿದ ಶಿಕ್ಷಣವೆಂಬ ಆಸ್ತ್ರದ ಫಲವಾಗಿ ದಲಿತರು ಸಮಾಜದಲ್ಲಿ ಮುಕ್ತಿ ಕಾಣಲು ಸಾಧ್ಯವಾಗಿದೆ, ಅಂಬೇಡ್ಕರ್ ಸಮಾಜದ ಸುಧಾರಣೆಗಾಗಿ ತಮ್ಮ ಜೀವನವನ್ನೆ ಮುಡುಪಗಿಟ್ಟು ನಡೆಸಿದ ಹೋರಾಟಗಳ ಸಾಧನೆಯು ಸಾಮಾನ್ಯವಾಗಿರಲಿಲ್ಲ ಐತಿಹಾಸಿಕ ದಾಖಲೆಯಾಗಿದೆ. ೩೭ ಪದವಿಗಳನ್ನು ಪಡೆದು ಅಧ್ಯಾಯನ ನಡೆಸಿ ಇಡೀ ಮನುಕುಲವೇ ಒಪ್ಪುವಂತ ಸಂವಿಧಾನವನ್ನು ರಚಿಸಿ ಕೊಟ್ಟ ಸಂವಿಧಾನ ಶಿಲ್ಪಿ, ದಮನಿತರ ಧ್ವನಿಯಾಗಿ ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿ ಕೊಟ್ಟವರು. ರಾಜಕೀಯವಾಗಿ ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ನೀಡಿದ ಮೀಸಲಾತಿಯಿಂದಾಗಿ ದಲಿತರು ಇಂದು ಸಮಾಜ ಮುಖಿಗಳಾಗಿ ಉನ್ನತವಾದ ಸ್ಥಾನ ಮಾನಗಳಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಯಿತು. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ದಲಿತ ಸಮುದಾಯದಲ್ಲಿ ಎಡ ಬಲ ಎಂದು ಕಿತ್ತಾಡದೆ, ಅಕಾಶದಲ್ಲಿ ಎಷ್ಟೆ ನಕ್ಷತ್ರಗಳು ಮಿನುಗಿದರು ಬೆಳಕನ್ನು ಕೊಡುವ ಸೂರ್ಯಚಂದ್ರ ಇದ್ದ ಹಾಗೆ, ಅಂಬೇಡ್ಕರ್ ಅವರಿಗೆ ಯಾರು ಸಾಟಿಯಿಲ್ಲ ಎಂದು ಬಣ್ಣಿಸಿದರು,
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವರ್ತೂರು ಮುನಿರಾಜ್, ಮಾಜಿ ಸದಸ್ಯರಾದ ಪಾಪಣ್ಣ, ಮುಖಂಡರಾದ ತಿಮ್ಮನವರ ಮಂಜುನಾಥ್, ಕೃಷ್ಣಮೂರ್ತಿ ವಿ.ನಾರಾಯಣಸ್ವಾಮಿ,ಮುನಿಯಪ್ಪ ಮುನಿಸ್ವಾಮಿ ರಮೇಶ್ ಗಾರೆ ನಾರಾಯಣಸ್ವಾಮಿ ಗೌತಮ್ ಅವಲಪ್ಪ ಇದ್ದರು.
























