Home ಜಿಲ್ಲೆ ತುಮಕೂರು ವೃತ್ತಿ ನಿವೃತ್ತಿ ನಂತರ ಕ್ರಿಯಾಶೀಲ ಬದುಕು ರೂಪಿಸಿಕೊಳ್ಳಲು ಶಾಸಕರ ಸಲಹೆ

ವೃತ್ತಿ ನಿವೃತ್ತಿ ನಂತರ ಕ್ರಿಯಾಶೀಲ ಬದುಕು ರೂಪಿಸಿಕೊಳ್ಳಲು ಶಾಸಕರ ಸಲಹೆ

ತುಮಕೂರು, ಏ. ೪- ವೃತ್ತಿಯಿಂದ ನಿವೃತ್ತರಾದವರು ಪ್ರವೃತ್ತಿ ರೂಢಿಸಿಕೊಂಡು ಕ್ರಿಯಾಶೀಲವಾಗಿ ಬದುಕಬೇಕು. ಆಗ ವಿಶ್ರಾಂತ ಜೀವನವು ಉತ್ಸಾಹದಿಂದ ಕೂಡಿರುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.


ತೋವಿನಕೆರೆಯ ಗಂಗಾಧರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರಾಗಿ, ಪ್ರಭಾರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹನುಮಂತರಾಯಪ್ಪ ಅವರಿಗೆ ಅವರ ಸ್ನೇಹ ಬಳಗದ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹನುಮಂತರಾಯಪ್ಪ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.


ವೃತ್ತಿಯಿಂದ ನಿವೃತ್ತರಾದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಗುವುದಿಲ್ಲ, ನಿವೃತ್ತರು ಹೊಸ ಪ್ರವೃತ್ತಿ ಆರಂಭಿಸಿ ಹೊಸ ಬದುಕು ರೂಪಿಸಿಕೊಂಡು ಸ್ವಾರ್ಥಕವಾಗಿ ಬಾಳಬೇಕು. ಅವರ ಜೀವನ ಶೈಲಿ ಇತರರಿಗೆ ಪ್ರೇರಣೆ ಆಗುವಂತಿರಬೇಕು ಎಂದು ಸಲಹೆ ಮಾಡಿದರು.


ಚಲನಚಿತ್ರ ನಟ ತೋವಿನಕೆರೆ ಹನುಮಂತಗೌಡ ಮಾತನಾಡಿ, ಶಿಕ್ಷಕ ವೃತ್ತಿ ಆರಂಭಿಸಿ ಆದರ್ಶ ಶಿಕ್ಷಕರಾಗಿ ಹೆಸರು ಮಾಡಿದ ಹನುಮಂತರಾಯಪ್ಪ ಅವರು ಬಹಳಷ್ಟು ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ನೆರವಾಗಿದ್ದಾರೆ. ನಿವೃತ್ತಿ ನಂತರವೂ ಅವರು ಕಿರಿಯರಿಗೆ ಮಾರ್ಗದರ್ಶನ ನೀಡುವಂತಹ ಕೆಲಸಗಳಲ್ಲಿ ತೊಡಗಿಕೊಂಡು ತಾವೂ ಕ್ರಿಯಾಶೀಲರಾಗಿ ನಿವೃತ್ತಿ ಜೀವನದಲ್ಲಿ ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಜೆ.ಜಗದೀಶ್, ತೋವಿನಕೆರೆ ವಿಜಯಕುಮಾರ್, ಮಹಾಲಿಂಗಯ್ಯ, ಹೆಬ್ಬೂರು ಶ್ರೀನಿವಾಸಮೂರ್ತಿ, ಡೈರಿ ಪ್ರಕಾಶ್, ಗೋವಿಂದರಾಜು, ಸುರೇಶ್, ಸ್ವಾಮಿ, ರವಿ ರಾಥೋಡ್ ಭಾಗವಹಿಸಿದ್ದರು.