
ಬೀದರ್: ಮಾ.6:ಏಕಾಗ್ರತೆ, ತಲ್ಲೀನತೆ ಹಾಗೂ ಭಕ್ತಿಯ ಓದಿನಿಂದ ಅಗಾಧವಾದ ಜ್ಞಾನಶಕ್ತಿಯ ಅನಾವರಣವಾಗುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 24ನೇ ವಾರ್ಷಿಕೋತ್ಸವ ಹಾಗೂ ಹತ್ತನೆ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಸತತ ಮತ್ತು ಸರಿಯಾದ ಪ್ರಯತ್ನದಿಂದ ಪರೀಕ್ಷೆಯನ್ನು ಸಂತಸದಿಂದ ಎದುರಿಸಲು ಸಾಧ್ಯವಾಗುತ್ತದೆ.
ಅಚಲವಾದ ಶ್ರದ್ಧೆ, ನಿಷ್ಠೆಯಿಂದ ಕೂಡಿದ ಅಭ್ಯಾಸ, ಆತ್ಮ ಬಲವನ್ನು ಹೆಚ್ಚಿಸಿ ಆತಂಕವನ್ನು ದೂರ ಮಾಡುತ್ತದೆ.
ಪರೀಕ್ಷೆ ಎಂಬುದು ಪ್ರಮಾಣ ಪತ್ರ ಕೊಡುವ ಒಂದು ಮಾಧ್ಯಮ ಎಂದು ತಿಳಿಯದೆ, ಬದುಕಿನ ದಿಕ್ಸೂಚಿ ಹಾಗೂ ಆತ್ಮ ವಿಮರ್ಶೆಯ ಸಾಧನವೆಂದು ಅರಿತು ಅಧ್ಯಯನ ಶೀಲರಾದಾಗ ಕಲಿಕೆ ಎಂಬುದು ನಿತ್ಯೋತ್ಸವ ವಾಗುತ್ತದೆ.
ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರು ಸೇವಾ ಮನೋಭಾವದವರಾಗಿದ್ದು, ಅವರ ಶ್ರಮ ಮಕ್ಕಳ ಫಲಿತಾಂಶದಲ್ಲಿ ಸಾರ್ಥಕ ರೂಪ ತಾಳಲಿ, ಎಲ್ಲ ಮಕ್ಕಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಲಿ ಎಂದು ಶುಭ ಹಾರೈಸಿದರು.
ಶಿಕ್ಷಕರಾದ ಅಂಬಾರಾಯ ಉಗಾಜಿ ಕೋಹಿನೂರ ಮಾತನಾಡಿ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರನ್ನು ಯಾವ ರೂಪದಲ್ಲಿ ನೋಡಿದರೂ ಪೂರ್ಣ ಚಂದಿರರಂತೆ ಕಾಣುತ್ತಾರೆ.
ಪರುಷಮಣಿಯಾಗಿರುವ ಪೂಜ್ಯರ ಸನ್ನಿಧಿಗೆ ಬಂದವರೆಲ್ಲ ಚಿನ್ನ ವಾಗುವುದು ಖಚಿತ, ಶಿಕ್ಷಣ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅಪಾರ ಅನನ್ಯ ಎಂದು ನುಡಿದರು.
ವಿದ್ಯಾರ್ಥಿಗಳಾದ ವಿಕಾಸ ಬೆಲೂರ, ಸೋಮಶೇಖರ ಹೊಸಳ್ಳಿ, ನಾಗರತ್ನ ಹಿರೇಮಠ, ವೈಷ್ಣವಿ ಚೌದ್ರಿ, ಸುಮಿತ ಅಬ್ಬಜಲಪೂರ, ನಾಗೇಶ ಮಾದನ ಹಿಪ್ಪರಗಾ ಅನಿಸಿಕೆ ವ್ಯಕ್ತಪಡಿಸಿದರು.
ಶಾಲೆ ಆಡಳಿತ ಅಧಿಕಾರಿ ಐ.ಜಿ. ಮಠಪತಿ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಸುನೀತಾ ನಾಲೂರೆ, ಗಜೇಂದ್ರ ಸಂತಾಜಿ, ಸಂತೋಷ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಟೊಣಪೆ, ಸಂತೋಷ ಕಾಂಬಳೆ, ಲಕ್ಷ್ಮಣ ಬೆಡಗೆ, ನಾಗಣ್ಣ ಪಾಟೀಲ, ಮಧುರಾಯ ಕೆರಗೋಟೆ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.
ಹತ್ತನೇ ತರಗತಿ ವಿದ್ಯಾರ್ಥಿಗಳು ಹಾರಕೂಡ ಶ್ರೀಗಳ 930ನೇ ತುಲಾಭಾರ ಮಾಡಿ ಆಶೀರ್ವಾದ ಪಡೆದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ 24ನೇ ವಾರ್ಷಿಕೋತ್ಸವ ಹಾಗೂ ಹತ್ತನೆ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷರಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶಾಲೆ ಆಡಳಿತ ಅಧಿಕಾರಿ ಐ.ಜಿ. ಮಠಪತಿ, ಮಲ್ಲಿನಾಥ ಹಿರೇಮಠ ಹಾರಕೂಡ, ಮೇಘರಾಜ ನಾಗರಾಳೆ, ಸುನೀತಾ ನಾಲೂರೆ, ವಿಜಯಕುಮಾರ ಸಂಗೋಳಗೆ ಮುಂತಾದವರು ಉಪಸ್ಥಿತರಿದ್ದರು.






















