
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.05: ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಾಸ್ಟೆಲ್, ವಿಮ್ಸ್, ಜೆಸ್ಕಾಂ, ಕೆಪಿಟಿಸಿಎಲ್ ಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು. ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ.ದೇವದಾಸ್, ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ಉಪಾಧ್ಯಕ್ಷರಾದ ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್, ಗುತ್ತಿಗೆ ಕಾರ್ಮಿಕ ಮುಖಂಡರಾದ ಚೇತನ್, ಕಿರಣ್ ಕುಮಾರ್, ಮುರಳಿ, ಹುಲುಗಪ್ಪ, ಪಾರ್ವತಿ, ಚಂದ್ರಮ್ಮ, ರೋಹಿಣಿ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ತಮ್ಮ ಬೇಡಿಕೆಗಳಾದ
ಕನಿಷ್ಠ ವೇತನ ಹೆಚ್ಚಳ ಕುರಿತ ರಾಜ್ಯ ಸರ್ಕಾರದ ಅಧಿಸೂಚನೆ ಕೂಡಲೆ ಹೊರಡಿಸಬೇಕು. ಹೊರಗುತ್ತಿಗೆ ~ಪದ್ಧತಿಯನ್ನು~ ರದ್ದುಗೊಳಿಸಿ, ಕಾರ್ಮಿಕರ ಸೇವೆಯನ್ನು ಖಾಯಂ ಮಾಡಿ. ಅಲ್ಲಿವರೆಗೂ ಎಲ್ಲಾ ಜಿಲ್ಲೆಗಳಲ್ಲಿ ವಿವಿದುದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.






















