Home ಜಿಲ್ಲೆ ಬೆಂಗಳೂರು ಜಿಲ್ಲೆಯಲ್ಲಿ ಶೇ. ೯೯.೯೯ರಷ್ಟು ನಮೂನೆ ವಿತರಣೆ

ಜಿಲ್ಲೆಯಲ್ಲಿ ಶೇ. ೯೯.೯೯ರಷ್ಟು ನಮೂನೆ ವಿತರಣೆ

ಕೋಲಾರ, ಜು,೧೪-ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣಾ ಕಾರ್ಯವು ಭರದಿಂದ ಸಾಗಿದ್ದು, ಈವರೆಗೆ ಶೇ.೯೯.೯೯ ರಷ್ಟು ಮತದಾರರಿಗೆ ಎನ್ಯುಮರೇಷನ್ ಫಾರ್ಮ್‌ಗಳನ್ನು ಮನೆಮನೆಗೆ ವಿತರಿಸಲಾಗಿದೆ ಹಾಗೂ ಶೇ.೩೫ ರಷ್ಟು ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ತಿಳಿಸಿದರು.


ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ ಆಡಳಿತವು ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.


ಕಳೆದ ತಿಂಗಳ ೩೦ನೇ ತಾರೀಖಿನಿಂದ ಎನ್ಯುಮರೇಷನ್ ಫಾರ್ಮ್‌ಗಳ ಹಂಚಿಕೆ ಕಾರ್ಯ ಪ್ರಾರಂಭವಾಗಿದ್ದು, ಜಿಲ್ಲೆಯ ೧,೫೩೮ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಜಿಲ್ಲೆಯ ಒಟ್ಟು ೧೨,೯೫,೨೬೫ ಮತದಾರರ ಪೈಕಿ ಈಗಾಗಲೇ ೧೨,೯೪,೯೪೮ ಫಾರ್ಮ್‌ಗಳನ್ನು ವಿತರಿಸುವ ಮೂಲಕ ಶೂನ್ಯ ದೋಷದ ಗುರಿಯತ್ತ ಸಾಗುತ್ತಿದ್ದೇವೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು. ಭರ್ತಿಯಾದ ಫಾರ್ಮ್‌ಗಳನ್ನು ಪಡೆದು ಆಪ್ ಮೂಲಕ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವ ಡಿಜಿಟಲೀಕರಣ ಪ್ರಕ್ರಿಯೆಯೂ ಸಮಾನಾಂತರವಾಗಿ ನಡೆಯುತ್ತಿದ್ದು, ಈಗಾಗಲೇ ೪,೪೦,೯೪೩ ಫಾರ್ಮ್‌ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.


ಈ ಪ್ರಕ್ರಿಯೆಯನ್ನು ಕರಾರುವಕ್ಕಾಗಿ ಮತ್ತು ವೇಗವಾಗಿ ಪೂರ್ಣಗೊಳಿಸಲು ಹಾಗೂ ಬಿಎಲ್‌ಒಳಿಗೆ ಎದುರಾಗುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಡಿಜಿಟಲೀಕರಣ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜತೆಗೆ, ವೇಗ ಹೆಚ್ಚಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಒ, ಕಾರ್ಯದರ್ಶಿಗಳು ಹಾಗೂ ವಿ.ಎ ಗಳನ್ನು ಸಹಾಯಕರಿಗಾಗಿ ನಿಯೋಜಿಸಲಾಗಿದೆ. ದೋಷರಹಿತ ಹಾಗೂ ಗುಣಮಟ್ಟದ ಡಿಜಿಟಲೀಕರಣವನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಕರಿಂದ (ಸೂಪರ್‌ವೈಸರ್) ಶೇ.೫೦ರಷ್ಟು, ತಹಶೀಲ್ದಾರ್ ಹಂತದಲ್ಲಿ ಶೇ. ೩೦ರಷ್ಟು ಹಾಗೂ ಇಆರ್‌ಒ ಹಂತದಲ್ಲಿ ಶೇ. ೨೦ರಷ್ಟು ಮರುಪರಿಶೀಲನೆ (ವೆರಿಫಿಕೇಶನ್) ಮಾಡಲಾಗುತ್ತಿದೆ ಎಂದು ಡಾ. ರವಿ ಅವರು ವಿವರಿಸಿದರು.


ಜಿಲ್ಲೆಯಲ್ಲಿ ಒಟ್ಟು ೧೭,೫೬೯ ಮತದಾರರು ಗೈರುಹಾಜರಾದ, ಸ್ಥಳಾಂತರಗೊಂಡ ಮತ್ತು ಮರಣಹೊಂದಿದ (ಎ.ಎಸ್.ಡಿ.ಡಿ.ಓ) ಪಟ್ಟಿಯಲ್ಲಿದ್ದಾರೆ. ಇದರಲ್ಲಿ ಗೈರುಹಾಜರಾದ ೫,೨೨೭ ಹಾಗೂ ಸ್ಥಳಾಂತರಗೊಂಡ ೫,೧೩೫ ಮತದಾರರು ವಾಪಸ್ ಬಂದು ತಮ್ಮ ವಿವರಗಳನ್ನು ಒದಗಿಸಲು ಇದೇ ತಿಂಗಳ ೨೯ರವರೆಗೆ ಕಾಲಾವಕಾಶ ನೀಡಲಾಗಿದೆ. ಅಲ್ಲದೇ, ಮತದಾರರು ಆನ್‌ಲೈನ್ ಮೂಲಕವೂ ತಮ್ಮ ಇ-ಫಾರ್ಮ್ ಸಲ್ಲಿಸಲು ಅವಕಾಶವಿದ್ದು, ಈಗಾಗಲೇ ೨,೧೪೯ ಮಂದಿ ಈ ಸೌಲಭ್ಯ ಬಳಸಿಕೊಂಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಹೊಸದಾಗಿ ಸೇರ್ಪಡೆಗೊಳ್ಳಲು ಫಾರ್ಮ್ ೬ ಭರ್ತಿ ಮಾಡಿ ನೀಡಲು ಈಗಲೂ ಮುಕ್ತ ಅವಕಾಶವಿದ್ದು, ಬಿಎಲ್‌ಒಗಳ ಬಳಿ ನಮೂನೆ ಪಡೆದು ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.