
ಪ್ರೀತಿ-ಜ್ಞಾನದ ಬೆಸುಗೆಯಿಂದ ವಿವೇಕ ಜಾಗೃತ- ಪರಮಪೂಜ್ಯ ಡಾ.ಪೀಟರ್ ಪಾವ್ಲ್ ಸಲ್ದಾನ
ಪುತ್ತೂರು: ಜ್ಞಾನಾರ್ಜನೆ ಪದವಿಯೊಂದಿಗೆ ವಿಸ್ತಾರಗೊಳ್ಳಬೇಕೇ ಹೊರತು ಕೊನೆಯಾಗಬಾರದು. ನಿರಂತರ ಕಲಿಕೆ ಹಾಗೂ ಹೊಸ ಜ್ಞಾನದ ಅರಸುವಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜ್ಞಾನ ಮತ್ತು ಪ್ರೀತಿಯ ಬೆಸುಗೆ ವಿವೇಕದ ಹಾದಿಯಾಗುತ್ತದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಕ್ಯಾಥೊಲಿಕ್ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಪರಮಪೂಜ್ಯ ಡಾ.ಪೀಟರ್ ಪಾವ್ಲ್ ಸಲ್ದಾನ ಅಭಿಪ್ರಾಯಪಟ್ಟರು.
ಶುಕ್ರವಾರ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಶಿಕ್ಷಣಪಯಣದ ಮಹತ್ವದ ಮೈಲಿಗಲ್ಲಾಗಿರುವ ಪ್ರಥಮ ಪದವೀಧರರಿಗೆ ‘ಪದವಿಪ್ರದಾನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಮ್ಮ ಜ್ಞಾನ ದಿಗಂತ ಮತ್ತಷ್ಟು ಹೆಚ್ಚಾಗಬೇಕಾದರೆ ಸಂಶೋಧನೆಯತ್ತ ಚಿಂತನೆಗಳು ಹೆಚ್ಚಾಗಬೇಕು. ನಮ್ಮ ಜ್ಞಾನವೇ ಸಾಕು ಎಂಬ ಸಂಕುಚಿತ ಮನೋಭಾವವನ್ನು ಬಿಟ್ಟು ಹೊಸತನಗಳತ್ತ ದೃಷ್ಟಿ ಹಾಯಿಸಬೇಕು. ನಾವು ಗಳಿಸುವ ಜ್ಞಾನ ವೈಯುಕ್ತಿಕ ಬದುಕಿಗೆ ಸೀಮಿತಗೊಳ್ಳದೆ ಸಮಾಜದ ಒಳಿತಿನ ಮಾರ್ಗಕ್ಕಾಗಿ ಬಳಕೆಯಾಗಬೇಕು ಎಂಬ ಸಂದೇಶದೊಂದಿಗೆ ಆಶೀರ್ವಾದ ನೀಡಿದರು.
ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಗಣೇಶ್ ಸಂಜೀವ್ ಅವರು ಪದವಿಪ್ರದಾನ ನಡೆಸಿ ಮಾತನಾಡಿ, ಮನೆ-ಕಾಲೇಜು ಶಿಕ್ಷಕರೆಂಬ ರಕ್ಷಣಾವಲಯದಲ್ಲಿ ಬದುಕುತ್ತಿದ್ದ ನೀವು ವಿಭಿನ್ನ ಸವಾಲುಗಳು ಹಾಗೂ ಸಂಕೀರ್ಣತೆಗಳ ವಿಶಾಲ ಸಮಾಜವನ್ನು ಎದುರಿಸಲು ಹೆಜ್ಜೆ ಇಟ್ಟಿದ್ದೀರಿ. ಈಗ ನೀವು ಗಳಿಸಿದ ಶಿಕ್ಷಣದ ಅರ್ಥ ಅನಾವರಣಗೊಳ್ಳಲಿದೆ. ಕಲಿಕೆಯ ಸಿದ್ಧಾಂತ, ಪರಿಕಲ್ಪನೆಗಳು ಹಾಗೂ ಜ್ಞಾನ ಜೀವನದ ಸವಾಲುಗಳನ್ನು ಎದುರಿಸಲು ಶಕ್ತವಾಗಬೇಕು. ಸಮಸ್ಯೆಗಳ ವಿಶ್ಲೇಷಣೆ ಹಾಗೂ ಸೂಕ್ತ ನಿರ್ಧಾರಗಳು ನಾಗರಿಕ ಸಮಾಜದಲ್ಲಿ ಮುಂದಡಿ ಇಡಲು ದಾರಿದೀಪವಾಗಬೇಕು ಎಂದರು.
ಕ್ಯಾಥೋಲಿಕ್ ಶಿಕ್ಷಣಮಂಡಳಿಯ ಕಾರ್ಯದರ್ಶಿಯಾದ ಅತಿ ವಂದನೀಯ ಪ್ರವೀಣ್ ಲಿಯೋ ಲಸ್ರಾದೋ ಅವರು ನೀವು ಪಡೆದ ಪದವಿ ಪಯಣದ ಕೊನೆಯಲ್ಲ. ಹೊಸಕನಸುಗಳನ್ನು ಕಾಣುವ ಹಾಗೂ ಅದನ್ನು ಸಾಕಾರಗೊಳಿಸುವ ಹೊಸ ಅಧ್ಯಾಯದ ಆರಂಭ. ಕನಸುಗಳೇ ಭವಿಷ್ಯದ ದಿಕ್ಕು ನಿರ್ಧರಿಸುತ್ತವೆ. ಅದನ್ನು ನನಸಾಗಿಸುವ ಪರಿಶ್ರಮ ನಿಮ್ಮದಾಗಬೇಕು ಎಂದರು.
ಕಾಲೇಜಿನ ವಿವಿಧ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗೈದು ಪ್ರಥಮ ರ್‍ಯಾಂಕ್ ಪಡೆದ ಐವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತರಗತಿಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಎಂ.ಎಸ್.ಡಬ್ಲ್ಯು. ವಿಭಾಗದ ಸ್ನೇಹಾ ರೋಸ್ ಜೇಕಬ್, ಎಂ.ಕಾಂ. ನ ಚಸ್ಮಿಕಾ ಟಿ, ಎಂ. ಸ್ಸಿ. ಭೌತಶಾಸ್ತ್ರ ವಿಭಾಗದ ನಿತೀಶ್, ಎಂ.ಎಸ್ಸಿ. ಗಣಿತ ಶಾಸ್ತ್ರದ ಅನುಪಮಾ ಹಾಗೂ ಎಂಸಿಎ ವಿಭಾಗದ ನಿರೀಕ್ಷಾ ಆರ್ ಅವರನ್ನು ಗೌರವಿಸಲಾಯಿತು. ಕಾಲೇಜಿನ ಎಂಎಸ್‌ಡಬ್ಲ್ಯೂ., ಎಂ.ಕಾಂ., ಸ್ನಾತಕೋತ್ತರ ಭೌತಶಾಸ್ತ್ರ, ಸ್ನಾತಕೋತ್ತರ ಗಣಿತಶಾಸ್ತ್ರ ಹಾಗೂ ಎಂಸಿಎ ವಿಭಾಗಗಳ ಒಟ್ಟು ೬೦ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಪದವಿ ಪ್ರಮಾಣ ವಚನವನ್ನು ಬೋಧಿಸಿದರು.
ಕಾಲೇಜಿನ ಸಂಚಾಲಕರಾದ ಅತಿ. ವಂ. ಜಾನ್ ಬಿ. ಸಲ್ದಾನಾ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಎಂ, ಶೈಕ್ಷಣಿಕ ಕುಲಸಚಿವರಾದ ಡಾ| ನಾರ್ಬರ್ಟ್ ಮಸ್ಕರೇನಸ್, ಹಣಕಾಸು ಅಧಿಕಾರಿ ಡಾ| ಎಡ್ವಿನ್ ಎಸ್ ಡಿಸೋಜ, ಪುತ್ತೂರು ಮಾಯಿ ದೆ ದೇವುಸ್ ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷರಾದ ರೋಶನ್ ಲಸ್ರಾದೋ, ಪರೀಕ್ಷಾಂಗ ಉಪ ಕುಲಸಚಿವರುಗಳಾದ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೇರಾ ಮತ್ತು ಅಭಿಷೇಕ್ ಸುವರ್ಣ , ಶೈಕ್ಷಣಿಕ ಉಪಕುಲಸಚಿವರಾದ ವಿಪಿನ್ ನಾಯ್ಕ್ ಎನ್. ಎಸ್ ಹಾಗೂ ಐದು ಸ್ನಾತಕೋತ್ತರ ವಿಭಾಗಗಳ ಸಂಯೋಜಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪರ್ಫಾರ್ಮಿಂಗ್ ಆರ್ಟ್ಸ್ ತಂಡದವರು ಪ್ರಾರ್ಥಿಸಿದರು. ಪರೀಕ್ಷಾಂಗ ಕುಲಸಚಿವರಾದ ಡಾ| ವಿನಯಚಂದ್ರ ವಂದಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ಪರ್ಲ್ ಫಿಯೋನಾ ಪಿರೇರಾ ಹಾಗೂ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಫಿಲೋಮಿನಾ ಕಾಲೇಜಿನ ಇತಿಹಾಸದ ಮತ್ತೊಂದು ಹೆಜ್ಜೆಗೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಸಾಕ್ಷಿಯಾದರು.
—ಬಾಕ್ಸ್ ಐಟಂ—
ಅರ್ಥಪೂರ್ಣ ಕೊಡುಗೆಯಾಗಿ..
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಾನವೀಯತೆ ತನ್ನ ಮೌಲ್ಯ ಕಳೆದುಕೊಳ್ಳಬಾರದು. ಮಾನವೀಯ ಮೌಲ್ಯಗಳು ಮತ್ತಷ್ಟು ಬಲಗೊಳ್ಳಬೇಕು. ಪದವೀಧರರು ತಮ್ಮ ಶೈಕ್ಷಣಿಕ ಸಾಧನೆಯ ಹಿಂದಿನ ಪ್ರೇರಣಾ ಶಕ್ತಿಗಳನ್ನು ಮರೆಯಬಾರದು. ನಿಮ್ಮ ನಿರಂತರ ಜ್ಞಾನಾರ್ಜನೆ, ಸಂಶೋಧನೆ, ಮಾನವೀಯತೆ, ಆತ್ಮವಿಮರ್ಶೆ ಹಾಗೂ ಪರಿಸರ ಕಾಳಜಿಯೊಂದಿಗೆ ಬೆಸೆದುಕೊಂಡು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಯಾಬೇಕು- ಪರಮಪೂಜ್ಯ ಡಾ.ಪೀಟರ್ ಪಾವ್ಲ್ ಸಲ್ದಾನ































