Home ಜಿಲ್ಲೆ ಮಂಗಳೂರು ಅನಧಿಕೃತವಾಗಿ ಸ್ಫೋಟಕ ಬಳಸಿ ಬಂಡೆ ಸ್ಫೋಟ ಇಬ್ಬರ ಬಂಧನ; ಡ್ರಿಲ್ಲಿಂಗ್ ಕಂಪ್ರೆಸರ್ ಸಹಿತ ಟ್ರ್ಯಾಕ್ಟರ್, ಕಾರು...

ಅನಧಿಕೃತವಾಗಿ ಸ್ಫೋಟಕ ಬಳಸಿ ಬಂಡೆ ಸ್ಫೋಟ ಇಬ್ಬರ ಬಂಧನ; ಡ್ರಿಲ್ಲಿಂಗ್ ಕಂಪ್ರೆಸರ್ ಸಹಿತ ಟ್ರ್ಯಾಕ್ಟರ್, ಕಾರು ವಶ

ಉಡುಪಿ: ಸರಕಾರಿ ಜಮೀನಿನಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಅನಧಿಕೃತವಾಗಿ ಬಳಸಿ ಬಂಡೆ ಕಲ್ಲುಗಳನ್ನು ಸ್ಫೋಟಿಸಿದ ಆರೋಪದ ಮೇಲೆ ಮಣಿಪಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸೆ.೫ರಂದು ಬೆಳಗ್ಗೆ ೧೧ ಗಂಟೆ ಸುಮಾರಿಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ, ಸರ್ವೆ ನಂ.೧೧೨/೨ರಲ್ಲಿ ೧.೫೪ ಎಕರೆ ವಿಸ್ತೀರ್ಣದ ಸರಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆಯನ್ನು ಮಣಿಪಾಲ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ಅವರು ಕೈಗೊಂಡಿದ್ದು, ಆರೋಪಿಗಳಾದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೆ. ಗೋವಿಂದರಾಜ್ (೪೦) ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಣಕರ್ಚಿ ಗ್ರಾಮದ ಶೇಖಪ್ಪ ಚಲವಾದಿ ಅಲಿಯಾಸ್ ಚಂದ್ರು (೨೮) ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಡ್ರಿಲ್ಲಿಂಗ್ ಕಂಪ್ರೆಸರ್ ಯಂತ್ರ ಜೋಡಿಸಲಾದ ಮಹೀಂದ್ರ ಟ್ರ್ಯಾಕ್ಟರ್ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.