
ಸಂಜೆವಾಣಿ ನ್ಯೂಸ್
ಮೈಸೂರು, ಅ.27: ದೇಶಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ಆವರಣದಲ್ಲಿ ಆಯೋಜಿಸಲಾದ ವಂದೇ ಮಾತರಂ ಶಿಬಿರ'ವು ವಿವಿಧ ರಾಜ್ಯಗಳ ಯುವಜನರಿಗೆ ಪರಸ್ಪರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿತುಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ವಿದ್ಯಾವರ್ಧಕ ಕಾಲೇಜಿನಲ್ಲಿ ಆಯೋಜಿಸಿದ್ದ ವಂದೇ ಮಾತರಂ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ವಿವಿಧ ಭಾಗಗಳಿಂದ ಆಗಮಿಸಿದ ಯುವಜನರು ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು, ಇತರ ರಾಜ್ಯಗಳ ಸಂಸ್ಕೃತಿಯನ್ನು ಗೌರವಿಸುವ ಮೂಲಕ ದೇಶದ ಏಕತೆಯನ್ನು ಬಲಪಡಿಸಬೇಕು ಎಂದರು. ವಂದೇ ಮಾತರಂ’ ಗೀತೆಯ 150ನೇ ವರ್ಷದ ಸ್ಮರಣೆಯ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಶಿಬಿರವು ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ದೇಶಭಕ್ತಿಯ ಭಾವನೆ ಮತ್ತು ರಾಷ್ಟ್ರದ ಮೇಲಿನ ಗೌರವವನ್ನು ಯುವಜನರಿಗೆ ಪರಿಚಯಿಸುವ ಮಹತ್ವವನ್ನು ಹೊಂದಿದೆ. ಭಾರತವು ವಿವಿಧ ಭಾಷೆ, ಧರ್ಮ, ಸಂಸ್ಕೃತಿಯನ್ನು ಹೊಂದಿದ್ದರೂ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ರಾಷ್ಟ್ರೀಯ ಏಕತೆಯಾಗಿದೆ. ಯುವಜನರು ಪರಸ್ಪರ ಗೌರವ ಮತ್ತು ಸಹಕಾರದ ಮನೋಭಾವ ಬೆಳೆಸಿಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧ ಮಾರ್ಗಗಳನ್ನು ಅನುಸರಿಸುವುದು ಅಗತ್ಯ. ಹಿಂದಿನ ತಲೆಮಾರುಗಳ ತ್ಯಾಗವನ್ನು ಸ್ಮರಿಸುತ್ತಾ, ಬಲಿಷ್ಠ, ಏಕತೆಯಿಂದ ಕೂಡಿದ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸಬೇಕು. ವಿಕಸಿತ ಭಾರತದ ಕನಸನ್ನು ನನಸಾಗಿಸಲು ಯುವಜನರಲ್ಲಿ ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆ ಬೆಳೆಸುವುದು ಅಗತ್ಯ ಎಂದು ಹೇಳಿದರು.
ಶಿಬಿರದ ಅಂಗವಾಗಿ ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು ಮತ್ತು ಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಯುವಜನರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ವಂದೇ ಮಾತರಂ ರಾಷ್ಟ್ರೀಯ ಭಾವನೆಯ ಸಂಕೇತ: ರಘು ಕೌಟಿಲ್ಯ
ವಿಧಾನ ಪರಿಷತ್ ಸದಸ್ಯ ರಘು ಆರ್. ಕೌಟಿಲ್ಯ ಮಾತನಾಡಿ, `ವಂದೇ ಮಾತರಂ’ ಗೀತೆಯು ಭಾರತದ ವಿವಿಧ ಭಾಷೆ, ಸಂಸ್ಕೃತಿಯನ್ನು ಒಗ್ಗೂಡಿಸುವ ರಾಷ್ಟ್ರೀಯ ಭಾವನೆಯ ಸಂಕೇತ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದ ಈ ಗೀತೆ ಭಾರತೀಯರಲ್ಲಿ ರಾಷ್ಟ್ರಪ್ರೇಮ ಮೂಡಿಸಿದೆ ಎಂದರು.
ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಶಿಬಿರದಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಯುವ ಪ್ರತಿಭೆಗಳನ್ನು ಮೈಸೂರಿನ ಶಾಲೆಗಳಿಗೆ ಕರೆತಂದು ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಸದಾಶಿವಗೌಡ, ನೆಹರು ಯುವ ಕೇಂದ್ರದ ಎಂ.ಎನ್. ನಟರಾಜ್, ಸರೋಜಾ, ರೇಷ್ಮಾ ಚಂದ್ರನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


























