
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಅ.27:- ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ಶಾಸಕರಿಗೆ 100 ಕೋಟಿ ರೂ. ಅನುದಾನ ಬರಲಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ವಾಲ್ಮೀಕಿ ನಾಯಕರ ಸಂಘದ ಎರಡು ತಾಲೂಕುಗಳ ಅಧ್ಯಕ್ಷರುಗಳು ನಿಮ್ಮ ಸಮುದಾಯದವರು ವಾಸಿಸುವ ಗ್ರಾಮಗಳಿಗೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಅಂದಾಜು ಪಟ್ಟಿಯ ಬೇಡಿಕೆಯನ್ನು ನನಗೆ ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪುರಸಭೆಯ ಬಯಲು ರಂಗಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಾಯಕ ಸಮುದಾಯದವರು ಹೆಚ್ಚಾಗಿ ವಾಸಿಸುವ ಗ್ರಾಮಗಳಲ್ಲಿ ಸಮುದಾಯ ಭವನ, ಸಿ.ಸಿ.ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಮಾಡಲು ಸಾಕಷ್ಟು ಅನುದಾನ ನೀಡಲಾಗಿದೆ ಇದರ ಜತೆಗೆ ಪಟ್ಟಣದ ವಾಲ್ಮೀಕಿ ನಾಯಕರ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ 1 ಕೋಟಿ ರೂ. ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪುರಸಭೆಯ ವಾರ್ಡ್ ನಂ.16ರಲ್ಲಿ ಇರುವ ವಾಲ್ಮೀಕಿ ಬಡಾವಣೆಯ ರಸ್ತೆಗಳನ್ನು ಕಾಂಕ್ರೀಟೀಕರಣ ಮತ್ತು ಚರಂಡಿ ನಿರ್ಮಾಣ ಮಾಡಲು ಅನುದಾನ ನೀಡಿರುವುದರ ಜತೆಗೆ ಈ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು 1.ಕೋಟಿ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.
ಸಾಲಿಗ್ರಾಮ ತಾಲೂಕು ಕೇಂದ್ರವಾಗಿದ್ದು ಅಲ್ಲಿ ವಾಲ್ಮೀಕಿ ನಾಯಕರ ಸಮುದಾಯ ಭವನ ನಿರ್ಮಾಣ ಮಾಡಲು ಬೇಕಾಗಿರುವ ನಿವೇಶನ ಕೋಡಿಸುವುದರ ಜತೆಗೆ 1ಕೋಟಿ ರೂ. ಅನುದಾನ ನೀಡಿ ನಿವೇಶನದ ಮಂಜೂರಾತಿ ಪತ್ರದ ಜತೆಗೆ ಭವನದ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೆರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಪ್ರಕಟಗೊಂಡಿದ್ದು ಜಿ.ಪಂ.ನಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನಿಗದಿ ಆಗಿಲ್ಲ ಇದರಲ್ಲಿ ನಾನು ಎಳ್ಳುವಷ್ಟು ಹಸ್ತಕ್ಷೇಪ ಮಾಡಿಲ್ಲ ಈ ರೀತಿಯ ಮೀಸಲಾತಿ ನಿಗದಿಯಾಗಲು ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರ ಎರಡು ತಾಲೂಕುಗಳು ಆಗಿರುವುದೇ ಕಾರಣ ಎಂದು ಮಾಹಿತಿ ನೀಡಿದ ಶಾಸಕರು ಸರ್ಕಾರ ಮೀಸಲಾತಿ ಬದಲಾವಣೆ ಮಾಡಿದರೆ ನಿಮ್ಮ ಸಮುದಾಯಕ್ಕೆ ಆಧ್ಯತೆ ನೀಡುವಂತೆ ಈಗಾಗಲೇ ಜಿಲ್ಲಾ ಮಂತ್ರಿ ಮತ್ತು ಮುಖ್ಯ ಮಂತ್ರಿಗಳಿಗೆ ಒತ್ತಾಯ ಮಾಡಲಾಗಿದೆ ಎಂದರು.
ವಾಲ್ಮೀಕಿ ನಾಯಕ ಸಮಾಜದವರು ನನ್ನ ಹೆಚ್ಚಾಗಿ ಬೆಂಬಲಿಸುವುದರಿಂದ ಅವರುಗಳಿಗೆ ರಾಜಕೀಯ ಸ್ಥಾನಮಾನ ನೀಡಲು ತೀರ್ಮಾನಿಸಿ ಪುರಸಭೆ, ಟಿಎಪಿಸಿಎಂಎಸ್, ಪಿಎಲ್ಡಿ ಬ್ಯಾಂಕ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಲವು ಅಧಿಕಾರದ ಅವಕಾಶಗಳನ್ನು ನೀಡಲಾಗಿದೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ನಿಗಮ ಮಂಡಳಿ ಅಧಿಕಾರ ದೊರೆಯಲಿದೆ ಆದ್ದರಿಂದ ಸಮುದಾಯದವರು ಅಪ್ರಚಾರಕ್ಕೆ ಕಿವಿಗೋಡಬಾರದೆಂದು ಮನವಿ ಮಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸುಂದರರಾಜ್ ಪ್ರಧಾನ ಭಾಷಣ ಮಾಡಿದರು, ನಾಯಕ ಸಮಾಜದ ಅಧ್ಯಕ್ಷರಾದ ಸುಬ್ಬುಕೃಷ್ಣ, ಸಿ.ಸಿ.ಮಹದೇವ್, ತಹಸೀಲದ್ದಾರ್ ಜಿ.ಸುರೇಂದ್ರಮೂರ್ತಿ, ಸಮಾಜ ಕಲ್ಯಾಣಾಧಿಕಾರಿ ಹೆಚ್.ಎಲ್.ಶಂಕರ್ ಮೂರ್ತಿ,ಕಲ್ಲಹಳ್ಳಿಶ್ರೀನಿವಾಸ್ ಮಾತನಾಡಿದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ದಲಿತ ಮುಖಂಡರಾದ ಎಸ್.ರವಿ, ಕಾಂತರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಈ.ಉಮೇಶ್, ಸಮಾಜದ ಮುಖಂಡರಾದ ಮಹದೇವನಾಯಕ, ಶಿವುನಾಯಕ್, ಗಣೇಶ್, ನಾಗರಾಜನಾಯಕ, ಎ.ಟಿ.ಶಿವಣ್ಣ, ದೇವರಾಜು, ಚಿಕ್ಕರಾಮನಾಯಕ, ಗಂಗಾಧರ್,ಮಹದೇವನಾಯಕ, ಶಂಕರನಾಯಕ, ನರಸಿಂಹನಾಯಕ, ಎಂ.ಆರ್.ಮಹದೇವನಾಯಕ ಮತ್ತೀತರರು ಹಾಜರಿದ್ದರು.


























