
ಹೊಸದೆಹಲಿ,ಜು. 18: ಈ ತಿಂಗಳಿನಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಂಡಿಸಲಿರುವ ‘ಕ್ಷೇತ್ರ ಮರುವಿಂಗಡಣೆ’ ಮತ್ತು ‘ಮಹಿಳಾ ಮೀಸಲಾತಿ’ ವಿಧೇಯಕಗಳು ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಭಾರಿ ಬಿರುಕು ಮೂಡಿಸುವ ಸಾಧ್ಯತೆಯಿದೆ. ಈ ಮಹತ್ವದ ಮಸೂದೆ ಅಸ್ತ್ರಗಳ ಮೂಲಕ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಅನ್ನು ಒಂಟಿಯಾಗಿಸಲು ಆಡಳಿತಾರೂಢ ಎನ್‍ಡಿಎ ತಂತ್ರ ರೂಪಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮುಂಬರುವ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ವಿಧೇಯಕಗಳನ್ನು ಮಂಡಿಸಿದರೆ, ಹಲವು ವಿರೋಧ ಪಕ್ಷಗಳ ಸಂಸದರು ಇದನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದು ಸರ್ಕಾರ ನಂಬಿದೆ. ವಿರೋಧ ಪಕ್ಷಗಳ ಒಕ್ಕೂಟದ ಕೆಲವು ಪ್ರಮುಖ ನಾಯಕರು ಈಗಾಗಲೇ ಎನ್‍ಡಿಎ ಪಾಳಯದೊಂದಿಗೆ ಕೈಜೋಡಿಸಿರುವುದರಿಂದ, ಈ ವಿಧೇಯಕಗಳ ಮೇಲಿನ ಮತದಾನದ ವೇಳೆ ಕಾಂಗ್ರೆಸ್ ಸಂಪೂರ್ಣವಾಗಿ ಒಂಟಿಯಾಗುವ ಮುನ್ಸೂಚನೆಗಳು ಲಭ್ಯವಾಗಿವೆ.
ಮಹಿಳಾ ಮೀಸಲಾತಿಗೆ ಸಂಬಂಧಿಸಿದ ‘ಸಂವಿಧಾನ (131ನೇ ತಿದ್ದುಪಡಿ) ವಿಧೇಯಕ, 2026’ ಕಳೆದ ಅಧಿವೇಶನದಲ್ಲಿ ಲೋಕಸಭೆಯ ಅಗ್ನಿಪರೀಕ್ಷೆಯಲ್ಲಿ ವಿಫಲವಾಗಿತ್ತು. ಆಗ ಬಿಲ್ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದಿದ್ದವು. ಆದರೆ ವಿಧೇಯಕ ಅಂಗೀಕಾರಗೊಳ್ಳಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಈ ಬಾರಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದಾಗಿ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂದು ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಆಕ್ಷೇಪವೆತ್ತಿವೆ. ಆದರೆ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ `ಒಂದು ದೇಶ, ಒಂದು ಚುನಾವಣೆ’ ವಿಧೇಯಕವನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಕಳೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿದ್ದ ಈ ವಿಧೇಯಕವನ್ನು ಪ್ರಸ್ತುತ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದ್ದು, ಸಮಿತಿಯ ಅವಧಿಯನ್ನು ಆಗಸ್ಟ್ 10 ರವರೆಗೆ ವಿಸ್ತರಿಸಲಾಗಿದೆ.
ವಿರೋಧ ಪಕ್ಷಗಳ ಒಮ್ಮತವಿಲ್ಲದೆ ಈ ಬಿಲ್ ತರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಜುಲೈ 20 ರಿಂದ ಆಗಸ್ಟ್ 13 ರವರೆಗೆ ನಡೆಯಲಿರುವ ಈ ಮುಂಗಾರು ಅಧಿವೇಶನದಲ್ಲಿ ಬಾಕಿ ಉಳಿದಿರುವ ಪ್ರಮುಖ ಸುಗ್ರೀವಾಜ್ಞೆಗಳನ್ನು ಅಂಗೀಕರಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಇದರಲ್ಲಿ ಮುಖ್ಯವಾಗಿ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರ ಸಂಖ್ಯೆಯನ್ನು 33 ರಿಂದ 37 ಕ್ಕೆ ಹೆಚ್ಚಿಸುವ ‘ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026’ ಸೇರಿದೆ.































