
ಕಲಬುರಗಿ,ಜು.18-ಸಮಾಜಸೇವಕ ಗಜಾನಂದ ದೇಶಪಾಂಡೆ ಅವರ ಜನ್ಮದಿನವನ್ನು ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅವರ ಗೆಳೆಯರ ಬಳಗದ ವತಿಯಿಂದ ನಿರಾಶ್ರಿತರೊಂದಿಗೆ ಕೇಕ್ ಕತ್ತರಿಸಿ, ಅನ್ನದಾಸೋಹ ಏರ್ಪಡಿಸಿ ಮಾನವೀಯ ಸೇವೆಯ ಸಂದೇಶ ಸಾರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಜಾನಂದ ದೇಶಪಾಂಡೆ ಅವರು, ಜನ್ಮದಿನವನ್ನು ಆಡಂಬರದಿಂದ ಆಚರಿಸುವುದಕ್ಕಿಂತ ಸಮಾಜದ ವಂಚಿತರು, ನಿರಾಶ್ರಿತರು ಹಾಗೂ ಅಗತ್ಯವಿರುವವರೊಂದಿಗೆ ಸಂತೋಷ ಹಂಚಿಕೊಳ್ಳುವುದೇ ನಿಜವಾದ ಸಂಭ್ರಮ ಎಂದು ಹೇಳಿದರು. ಮುಂದೆಯೂ ಸಮಾಜಸೇವೆಯ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ವಿನೋದ ಪಾಟೀಲ್ ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗಜಾನಂದ ದೇಶಪಾಂಡೆ ಅವರು ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳಿಗೆ ಆಹಾರ, ಅಗತ್ಯ ವಸ್ತುಗಳು ಮತ್ತು ವಿವಿಧ ರೀತಿಯ ನೆರವು ನೀಡುವ ಮೂಲಕ ಮಾನವೀಯ ಸೇವೆ ಸಲ್ಲಿಸಿದ್ದಾರೆ. ಅವರ ಸಮಾಜಮುಖಿ ಸೇವೆ ಎಲ್ಲರಿಗೂ ಮಾದರಿಯಾಗಿದ್ದು, ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಸಮಾಜಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು.
ವಿಶ್ವನಾಥ ಸಾಲಿಮಠ ಮಾತನಾಡಿ, ಗಜಾನಂದ ದೇಶಪಾಂಡೆ ಅವರು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜದ ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವ ವ್ಯಕ್ತಿತ್ವ ಹೊಂದಿದ್ದಾರೆ. ಅವರ ಸೇವಾ ಮನೋಭಾವ ಯುವಜನತೆಗೆ ಪ್ರೇರಣೆಯಾಗಿದ್ದು, ಇಂತಹ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಸ್ನೇಹಿತರು, ಸಮಾಜಮುಖಿ ಕಾರ್ಯಕರ್ತರು ಹಾಗೂ ನಿರಾಶ್ರಿತ ಪರಿಹಾರ ಕೇಂದ್ರದ ನಿವಾಸಿಗಳು ಭಾಗವಹಿಸಿ ಗಜಾನಂದ ದೇಶಪಾಂಡೆ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಶಿಧರ್ ವಾರದ್, ಗುರುರಾಜ್ ಕೊರಳಿ, ಪವನ ಉದ್ನೂರ್, ಉಮಾರ್, ಅಖಿಲ್, ಮೊಬಿನ್, ಕೀರಣ ಸೇರಿದಂತೆ ಗೆಳೆಯ ಬಳಗದವರು ಇದ್ದರು.






























